Advertisement

ನಗರದ ಮುಖ್ಯ ರಸ್ತೆಗಳಲ್ಲೇ ಬಾಯ್ದೆರೆದು ನಿಂತ ಕೇಬಲ್‌ ಚೇಂಬರ್‌!

04:27 AM Jan 17, 2019 | Team Udayavani |

ಮಹಾನಗರ: ನಗರದ ಮುಖ್ಯ ರಸ್ತೆಗಳಲ್ಲೇ ಬಾಯ್ದೆರೆದು ನಿಂತಿವೆ ಕೇಬಲ್‌ ಚೇಂಬರ್‌ಗಳು… ದ್ವಿಚಕ್ರ ವಾಹನ ಸವಾರರಿಗೆ ನಿತ್ಯ ಎದುರಾಗುತ್ತಿದೆ ಸಂಚಾರ ಸಂಕಟ; ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವುದು ನಿಶ್ಚಿತ!

Advertisement

ಇದು ನಗರದ ವಿವಿಧ ಮುಖ್ಯ ರಸ್ತೆ ಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾ ರರು ನಿತ್ಯ ಎದುರಿಸುವ ಸಂಚಾರ ಸಮಸ್ಯೆ. ನಗರದ ಕಂಕನಾಡಿ, ಜ್ಯೋತಿ, ಹಂಪನಕಟ್ಟೆ, ಮಿಲಾಗ್ರಿಸ್‌ ರಸ್ತೆಗಳಲ್ಲಿ ಸಂಚರಿಸಿದ ‘ಉದಯವಾಣಿ-ಸುದಿನ’ ತಂಡಕ್ಕೆ ಮಿಲಾ ಗ್ರಿಸ್‌ ರಸ್ತೆಯಲ್ಲಿದ್ದ ಚೇಂಬರ್‌ ಅಪಾಯದ ಅನುಭವ ನೀಡಿತು. ಇಲ್ಲಿ ಚೇಂಬರ್‌ ಕಿತ್ತು ಹೋಗಿ ಸುಮಾರು ಒಂದು ಫೀಟ್‌ನಷ್ಟು ಗುಂಡಿಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವುದು ಖಂಡಿತ.

ರಸ್ತೆಗಳ ಮಧ್ಯೆ ಅಲ್ಲಲ್ಲಿ ಅಳವಡಿಸಿರುವ ಕೆಲವು ಖಾಸಗಿ ಟೆಲಿಕಾಂ ಕಂಪೆನಿಗಳ ಕೇಬಲ್‌ ಚೇಂಬರ್‌ಗಳು ಅಲ್ಲಲ್ಲಿ ಕಿತ್ತು ಹೋಗಿದ್ದು ಅಪಾಯವನ್ನು ಆಹ್ವಾನಿ ಸುವಂತಿದೆ. ಹಲವಾರು ಸಮಯಗಳಿಂದ ರಸ್ತೆ ಮಧ್ಯದಲ್ಲೇ ಸಂಚಾರ ಸಮಸ್ಯೆ ಸೃಷ್ಟಿಸುತ್ತಿರುವ ಈ ಚೇಂಬರ್‌ಗಳ ನಿರ್ವಹಣೆಗೆ ಸಂಬಂಧಪಟ್ಟವರು ಮುಂ ದಾಗುತ್ತಿಲ್ಲ. ಇದರಿಂದ ಚೇಂಬರ್‌ ಮತ್ತಷ್ಟು ಎದ್ದು ಹೋಗಿದ್ದು, ಅಪಘಾತಗಳಿಗೆ ಆಹ್ವಾನಿ ಸುವಂತಿದೆ. ರಸ್ತೆ ಮಧ್ಯೆ ಹಾಕಲಾಗಿರುವ ಕೇಬಲ್‌ ಚೇಂಬರ್‌ಗಳು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಸೇರಿದ್ದಾಗಿದ್ದು, ನಿರ್ವಹಣೆ ಅವರದೇ ವ್ಯಾಪ್ತಿಗೆ ಬರುತ್ತದೆ ಎಂದು ಮನಪಾ ಪ್ರಮುಖರು ತಿಳಿಸಿದ್ದಾರೆ.

ಅಪಾಯ ಕಟ್ಟಿಟ್ಟ ಬುತ್ತಿ
ಬಲ್ಮಠದಿಂದ ಹಂಪನಕಟ್ಟೆಗೆ ತೆರಳಲು ಇದು ನೇರ ರಸ್ತೆಯಾದರೆ, ಕೆ.ಎಸ್‌. ರಾವ್‌ ರಸ್ತೆ ಕಡೆಯಿಂದ ಬರುವವರು ಇಲ್ಲಿ ಯೂಟರ್ನ್ ತೆಗೆದುಕೊಂಡು ಹಂಪನಕಟ್ಟೆಗೆ ತೆರಳುತ್ತಾರೆ. ಯೂ ಟರ್ನ್ ತೆಗೆದುಕೊಂಡು ಮುಖ್ಯ ರಸ್ತೆಗೆ ಸೇರುವ ಸ್ವಲ್ಪ ಮುಂಭಾಗದಲ್ಲೇ ಈ ಚೇಂಬರ್‌ ಗುಂಡಿ ಇರುವುದರಿಂದ ಎರಡೂ ಕಡೆ ಯಿಂದ ಬರುವ ವಾಹನಗಳು ಒಂದೇ ರಸ್ತೆ ಯನ್ನು ಸಂಪರ್ಕಿಸುವ ಸ್ಥಳವಾದ್ದರಿಂದ ಈ ಗುಂಡಿಯಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಅಲ್ಲದೆ, ವಾಹನಗಳು ಅತಿವೇಗದಲ್ಲಿರುವುದರಿಂದ ಒಮ್ಮೆಲೇ ಗುಂಡಿ ಗೋಚರಿಸದೆ, ಬೀಳುವ ಸಾಧ್ಯತೆ ಇದೆ. ರಾತ್ರಿ ಹೊತ್ತಿನಲ್ಲಿ ಸಂಚಾರವೇ ದುಸ್ತರವಾಗಿದೆ.

Advertisement

ಈ ಬಗ್ಗೆ ಪಾಲಿಕೆ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ ಪ್ರತಿಕ್ರಿಯಿಸಿ, ‘ಕೇಬಲ್‌ ಚೇಂಬರ್‌ಗಳು ಪಾಲಿಕೆಗೆ ಸಂಬಂಧಪಟ್ಟದ್ದಲ್ಲ. ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಸೇರಿದ್ದಾಗಿದೆ’ ಎಂದು ತಿಳಿಸಿದ್ದಾರೆ.

ಎರಡು ಚೇಂಬರ್‌ ಕುಸಿತ
ಕಂಕನಾಡಿ ಸರ್ಕಲ್‌ ಬಳಿಯೂ ಇಂತಹುದೇ ಕೇಬಲ್‌ ಚೇಂಬರ್‌ ಕುಸಿದಿದೆ. ಬಲ್ಮಠ ಮತ್ತು ಬೆಂದೂರ್‌ವೆಲ್‌ನಿಂದ ಕಂಕನಾಡಿಗೆ ತೆರಳುವ ವಾಹನ ಸವಾರರಿಗೆ ಕಂಕನಾಡಿಯಲ್ಲಿ ಎರಡೆರಡು ಸಂಚಾರ ಸಂಕಟ ಎದುರಾಗುತ್ತದೆ. ಸರ್ಕಲ್‌ ಸನಿಹದಲ್ಲಿಯೇ ಕೇಬಲ್‌ ಚೇಂಬರ್‌ ಆಳಕ್ಕಿಳಿದು ಗುಂಡಿ ನಿರ್ಮಾಣವಾಗಿದ್ದರೆ, ಸ್ವಲ್ಪ ಮುಂಭಾಗದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ಪಾಲಿಕೆಯಿಂದ ಮಾಡಲಾದ ವೃತ್ತಾಕಾರದ ಚೇಂಬರ್‌ ಕೂಡ ರಸ್ತೆಯ ಒಳ ಹೊಕ್ಕಿದ್ದು, ಅಪಾಯವಾಗಿ ಪರಿಣಮಿಸುತ್ತಿದೆ.

ಚೇಂಬರ್‌ ಕುಸಿದಿರುವುದರಿಂದ ಪ್ಲೇಟ್‌ನ ಬದಿಗಳು ವಾಹನದ ಚಕ್ರಕ್ಕೆ ಸಿಲುಕಿ ಸ್ಕಿಡ್‌ ಆಗುವ ಅಪಾಯವೂ ಇದೆ. ಇದು ಕಳೆದ ಹಲವಾರು ಸಮಯಗಳಿಂದ ಸಮಸ್ಯೆಯಾಗಿ ಕಾಡಿದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಹರಿಪ್ರಸಾದ್‌.

ಅಲುಗಾಡುವ ಪ್ಲೇಟ್
ಜ್ಯೋತಿ ಪೆಟ್ರೋಲ್‌ ಬಂಕ್‌ ಮುಂಭಾಗದ ರಸ್ತೆಯಲ್ಲಿ ಕೇಬಲ್‌ ಚೇಂಬರ್‌ ಒಳಭಾಗಕ್ಕೆ ಹೊಕ್ಕಿರುವುದಲ್ಲದೆ, ವಾಹನಗಳು ಓಡಾಟ ನಡೆಸುವಾಗ ಚೇಂಬರ್‌ನ ಪ್ಲೇಟ್‌ಗಳು ಅಲುಗಾಡುತ್ತಿವೆ. ಮೇಲ್ಭಾಗದಲ್ಲಿ ಕವರ್‌ ಇದ್ದರೂ ಒಳಭಾಗದಲ್ಲಿ ಯಾವುದೇ ಗಟ್ಟಿ ಇಲ್ಲ. ಇದರಿಂದ ಈ ಚೇಂಬರ್‌ ಇನ್ನಷ್ಟು ಕುಸಿತಗೊಂಡರೆ ವಾಹನ ಸವಾರರಿಗೆ ತೊಂದರೆಯಿದೆ.

ಸೂಚನೆ ನೀಡಲಾಗುವುದು
ಮಿಲಾಗ್ರಿಸ್‌, ಕಂಕನಾಡಿ, ಜ್ಯೋತಿ ಮುಂತಾದೆಡೆ ಕಿತ್ತು ಹೋಗಿರುವ ಕೇಬಲ್‌ ಚೇಂಬರ್‌ಗಳು ಯಾವ ಕಂಪೆನಿಗೆ ಸೇರಿದ್ದೆಂದು ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕೇಬಲ್‌ ಚೇಂಬರ್‌ಗಳನ್ನು ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಲಾಗುವುದು. ವಾಹನ ಸವಾರರಿಗೆ ಸಮಸ್ಯೆ ಉಂಟಾಗದಂತೆ ನಿರ್ವಹಿಸಲು ಹೇಳಲಾಗುವುದು.
– ಭಾಸ್ಕರ್‌ ಕೆ., ಮೇಯರ್‌

ಬಿಎಸೆನ್ನೆಲ್‌ನದ್ದಲ್ಲ
ಬಿಎಸೆನ್ನೆಲ್‌ ಇತ್ತೀಚೆಗೆ ಯಾವುದೇ ಕೇಬಲ್‌ ಚೇಂಬರ್‌ಗಳನ್ನು ಅಳವಡಿಸಿಲ್ಲ. ಹಂಪನಕಟ್ಟೆ, ಮಿಲಾಗ್ರಿಸ್‌, ಕಂಕನಾಡಿ ಮುಂತಾದೆಡೆ ಬಿಎಸೆನ್ನೆಲ್‌ನ ಚೇಂಬರ್‌ಗಳಿಲ್ಲ.
– ಬಿಎಸೆನ್ನೆಲ್‌ ಅಧಿಕಾರಿ

•ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next