ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಯಾಗಿ ವಾರ ಕಳೆದರೂ ಸಚಿವ ಸಂಪುಟ ರಚನೆಯಾಗದೆ ಇರುವುದಕ್ಕೆ ಪ್ರತಿಪಕ್ಷದ ನಾಯಕರು ಮಾಡುತ್ತಿರುವ ಟೀಕೆಗೆ ಉತ್ತರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಂಜೆ ಸಂಭಾವ್ಯರ ಪಟ್ಟಿ ಹೊತ್ತು ದೆಹಲಿಗೆ ತೆರಳಲಿದ್ದಾರೆ.
ಜಾತಿ ಲೆಕ್ಕಾಚಾರ, ಪ್ರಾದೇಶಿಕ ಪ್ರಾಮುಖ್ಯತೆ, ಯುವ ಮುಖಂಡತ್ವ, ಸಂಘ ಪರಿವಾರದ ಹಿನ್ನೆಲೆ ಇತ್ಯಾದಿ ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದಿಂದ ಸಂಭಾವ್ಯರ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿ, ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮದ ಬಗ್ಗೆ ಕೇಂದ್ರದಿಂದಲೇ ಸೂಚನೆ ನೀಡಲಾಗುತ್ತದೆ. ಮುಂದಿನ ಬುಧವಾರ ಅಥವಾ ಗುರುವಾರದಂದು ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆ.5ರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಆ.8ರ ನಂತರ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಹೀಗಾಗಿ, ಮುಂದಿನ ವಾರದ ಕೊನೆಯಲ್ಲಿ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಇದೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಯಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕು. ಯಾವ ಖಾತೆಯನ್ನು ಯಾವ ಸಮುದಾಯಕ್ಕೆ ಹಂಚಿಕೆ ಮಾಡಬೇಕು ಎಂಬಿತ್ಯಾದಿ ಎಲ್ಲ ಅಂಶಗಳು ಕೇಂದ್ರದ ವರಿಷ್ಠರ ಸಮ್ಮುಖದಲ್ಲೇ ಚರ್ಚೆಯಾಗಲಿವೆ. ಆ.9ರಿಂದ 11ರೊಳಗೆ ಸಚಿವ ಸಂಪುಟದ ರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಯ ಸಿಕ್ಕಿದರೆ 10ರಿಂದ 12 ಮಂದಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಹೀಗಾಗಿ, ಆ ಸ್ಥಾನವನ್ನು ಕಾಯ್ದಿರಿಸಿಕೊಂಡೇ ಸಚಿವ ಸಂಪುಟ ರಚನೆ ಮಾಡಬೇಕಿರುವ ಬಗ್ಗೆಯೂ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನೇಕಾರರ ಹಾಗೂ ಮೀನುಗಾರರ ಸಾಲಮನ್ನಾ ಮಾಡಿದ್ದಾರೆ.
ವಿವಿಧ ಇಲಾಖೆಯ ಅಧಿಕಾರಿಗಳ ಸಭೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿ, ಬರಗಾಲಕ್ಕೆ ತುರ್ತು ಸ್ಪಂದಿಸುವ ಸೂಚನೆಯನ್ನು ನೀಡಿದ್ದಾರೆ. ಕೊಡಗು ಪುನರ್ವಸತಿ ಕಾರ್ಯದ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ. ಇದರ ಜತೆಗೆ ಕೆಲವು ಅಧಿಕಾರಿಗಳ ವರ್ಗಾವಣೆಯನ್ನು ಮಾಡಿದ್ದಾರೆ. ಸಚಿವ ಸಂಪುಟ ರಚನೆ ಮಾಡದೇ ಏಕಚಕ್ರಾಧಿಪತಿಯಂತೆ ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮೂಲಕ ಸರ್ಕಾರವನ್ನು ಟೀಕಿಸಿದ್ದರು.
ರಾಜ್ಯದ ಸಚಿವ ಸಂಪುಟ ರಚನೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ನಾಯಕರ ಸೂಚನೆಯಂತೆ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆ ಪಟ್ಟಿಯನ್ನು ಸೋಮವಾರ ಸಂಜೆ ದೆಹಲಿಗೆ ಹೋಗುವ ಸಂದರ್ಭದಲ್ಲಿ ಕೊಂಡೊಯ್ಯುತ್ತಾರೆ. ಹಾಗೆಯೇ, ಕೇಂದ್ರ ಬಿಜೆಪಿ ನಾಯಕರು ಕೂಡ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುವ ಮಾಹಿತಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡುವ ಪಟ್ಟಿ ಮತ್ತು ಕೇಂದ್ರದ ವರಿಷ್ಠರು ಈಗಾಗಲೇ ಪಡೆದುಕೊಂಡಿರುವ ಪಟ್ಟಿಯ ಆಧಾರದಲ್ಲಿ ಸಂಪುಟ ರಚನೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.