Advertisement

ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಅನುಮಾನ

03:18 PM Jul 20, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

Advertisement

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸರ್ಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ
ನಡೆಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಅಧಿಕೃತ ಸಂಪುಟ ದರ್ಜೆಯ ಸ್ಥಾನ ನೀಡದಿರಲು ಹಿಂದೇಟು ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಸಿದ್ದರಾಮಯ್ಯ ಸಿಡಬ್ಲ್ಯುಸಿ ಸದಸ್ಯರಾಗಿ ಸೇರ್ಪಡೆಯಾಗಿರುವುದರಿಂದ ಹೈಕಮಾಂಡ್‌ ಮಟ್ಟದಲ್ಲಿಯೂ ಪ್ರಭಾವ ಬಳಸುವ ಸಾಧ್ಯತೆ ಇದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ ಹೀಗೆ‌ ಎಲ್ಲ ಅಧಿಕಾರ ಅವರ ಹಿಡಿತಕ್ಕೆಹೋಗುತ್ತದೆ  ಎಂಬ ಕಾರಣಕ್ಕೆ ಕ್ಯಾಬಿನೆಟ್‌ ದರ್ಜೆ ಸ್ಥಾನ ನೀಡಲು ಹಿಂದೆ-ಮುಂದೆ ನೋಡಲಾಗುತ್ತಿದೆ ಎನ್ನಲಾಗಿದೆ.

ಕಚೇರಿ ಬೋರ್ಡ್‌ ಬದಲಾವಣೆ: ಈ ಮಧ್ಯೆ, ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ವಿಧಾನಸೌಧದಲ್ಲಿ ಅವರಿಗಾಗಿ ಪ್ರತ್ಯೇಕ ಕಚೇರಿ ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ವಿಧಾನ ಸಭಾಧ್ಯಕ್ಷರಿಗಾಗಿ ವಿಶೇಷವಾಗಿ ನವೀಕರಣಗೊಳಿಸಿದ್ದ ಕಚೇರಿ ನೀಡಲಾಗಿತ್ತು. ಆ ಕಚೇರಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪಡೆಯಬಹುದಾಗಿತ್ತಾದರೂ ನನಗೆ ಬೇಡ ಸಿದ್ದರಾಮಯ್ಯ ಅವರಿಗೆ ಕೊಡಿ ಎಂದು
ಬಿಟ್ಟುಕೊಟ್ಟಿದ್ದರು.
 ಆದರೆ, ಸಿದ್ದರಾಮಯ್ಯಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ಇಲ್ಲದ ಕಾರಣ ಅವರಿಗೆ ಪ್ರತ್ಯೇಕ ಕಚೇರಿ
ನೀಡುವುದಕ್ಕೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ಕಚೇರಿಗೆ ಶಾಸಕಾಂಗ ಪಕ್ಷದ ನಾಯಕರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರು ಎಂದು ಹೆಸರು ಬದಲಾಯಿಸಲಾಗಿದೆ.  ವಿಧಾನ ಸೌಧದಮೊದಲನೇ ಮಹಡಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷಕ್ಕೆ ಕೊಠಡಿ ನೀಡಲಾಗಿದ್ದರೂ ಸಿದ್ದರಾಮಯ್ಯಗೆ ಪ್ರತ್ಯೇಕ ಕಚೇರಿ ನೀಡುವ ಹಿನ್ನೆಲೆಯಲ್ಲಿ ಅವರ ನಾಮಫ‌ಲಕ ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.

ಕಾವೇರಿ ತೊರೆಯಲು ಚಿಂತನೆ: ಸಮ್ಮಿಶ್ರ ಸರ್ಕಾರದಲ್ಲಿ ಅಧಿಕೃತ ಅಧಿಕಾರ ಇಲ್ಲದ ಕಾರಣ ಸರ್ಕಾರಿ ಬಂಗಲೆ ಯಲ್ಲಿ ಇರುವುದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಕಾವೇರಿ ನಿವಾಸ ಬಿಟ್ಟು ಬೇರೆ ಮನೆ ಮಾಡಲು ಚಿಂತಿಸಿದ್ದಾರೆ ಎನ್ನಲಾಗುತ್ತಿದೆ. ಕಾವೇರಿ ನಿವಾಸ ತೊರೆದು ಸಿದ್ದರಾಮಯ್ಯ ವಿಜಯನಗರದಲ್ಲಿರುವ ತಮ್ಮ ನಿವಾಸಕ್ಕೆ ವಾಸ್ತವ್ಯ ಬದಲಿಸಲು ಆಲೋಚಿರುವ ಬೆನ್ನಲ್ಲೇ ಅವರ ಆಪ್ತ ಶಾಸಕ ಭೈರತಿ ಸುರೇಶ್‌, ಸದಾಶಿವ ನಗರದಲ್ಲಿಯೇ ಮನೆ ಮಾಡುವಂತೆ ಮನವಿ ಮಾಡಿದ್ದು, ಮನೆ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

22 ಕ್ಕೆ ಸಿಡಬ್ಲ್ಯುಸಿ ಸಭೆ
ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಜುಲೈ 22ರಂದು  ನಡೆಯಲಿದ್ದು, ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಸಿದ್ದರಾಮಯ್ಯ ಹಾಜರಾಗಲಿದ್ದಾರೆ.  23 ಸದಸ್ಯರನ್ನೊಳಗೊಂಡ ಮೊದಲ ಸಭೆಯಲ್ಲಿ ಪ್ರಮುಖವಾಗಿ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ
ಮಾಡಿಕೊಳ್ಳುವುದರಿಂದ ಕಾಂಗ್ರೆಸ್‌ಗೆ ಆಗುವ ಅನುಕೂಲ ಮತ್ತು ಅನಾನುಕೂಲದ ಬಗ್ಗೆಯೂ ಸುದೀರ್ಘ‌ ಚರ್ಚೆ ನಡೆಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next