Advertisement

Cabinet Meeting: ಬೀದರ್‌, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ

08:41 PM Sep 17, 2024 | Team Udayavani |

ಬೀದರ್: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾಡಳಿತ ಭವನ ಮತ್ತು ಬೀದರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಬಹು ದಿನಗಳ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.

Advertisement

ಕಲಬುರ್ಗಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ಜಿಲ್ಲೆಯ ಎರಡು ಪ್ರಮುಖ ಬೇಡಿಕೆಗಳಿಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇತ್ತು. ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ವಿಶೇಷ ಪ್ರಯತ್ನದ ಫಲವಾಗಿ ಎರಡು ಒತ್ತಾಸೆಗಳಿಗೆ ಕೊನೆಗೂ ಸರ್ಕಾರ ಸಮ್ಮತಿ ನೀಡಿದೆ.

ನಿವೇಶನದ ಗೊಂದಲದಿಂದಾಗಿ ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾಡಳಿತ ಭವನಕ್ಕೆ ಅನುದಾನದ ಕೊರತೆ ಎದುರಾಗಿತ್ತು. ಸದ್ಯದ ಜಿಲ್ಲಾಧಿಕಾರಿ ಕಚೇರಿ ಶಿಥಲಗೊಂಡಿದ್ದು, ಅದೇ ಸ್ಥಳದಲ್ಲೇ ಭವನ ನಿರ್ಮಾಣಕ್ಕೆ ತೀರ್ಮಾನಿಸಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಆದರೂ ಕಟ್ಟಡ ಮಾತ್ರ ತಲೆ ಎತ್ತಿರಲಿಲ್ಲ. ಈಗ 59.80 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಸರ್ಕಾರ ಅಸ್ತು ನೀಡಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಯನ್ನು ಆರಂಭಿಸಬೇಕಿದೆ.

ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಘೋಷಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣ, ಷರತ್ತುಗಳ ಕಾರಣದಿಂದ ಅನುಷ್ಠಾನಕ್ಕೆ ವಿಳಂಬವಾಗಿತ್ತು. ಪೌರಾಡಳಿತ ಸಚಿವರ ತವರು ಕ್ಷೇತ್ರದಲ್ಲೇ ಹಿನ್ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪಾಲಿಕೆಗೆ ಬೇಕಾದ ಎಲ್ಲ ಷರತ್ತುಗಳನ್ನು ಪೂರೈಸಿದ್ದ ಬೀದರ ನಗರಸಭೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ನಿರ್ಣಯ ಕೈಗೊಳ್ಳಲಾಗಿದೆ.

Advertisement

ಅರಣ್ಯ ಸಚಿವ ಈಶ್ವರ ಖಂಡ್ರೆಯವರ ತವರು ಜಿಲ್ಲೆಯಾಗಿರುವ ಬೀದರದಲ್ಲಿ ಇಲಾಖೆಗೆ ಸಂಬಂಧಿತ ಎರಡು ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವ ವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಹಾಗೂ ಸಂರಕ್ಷಣಾತ್ಮಕ ಕಾರ್ಯಕ್ರಮಗಳನ್ನು 15 ಕೋಟಿ ರೂ.ಗಳ ಕೆಕೆಆರ್‌ಡಿಬಿ ಅನುದಾನದಲ್ಲಿ ಅನುಷ್ಟಾನಗೊಳಿಸಲು, ಜತೆಗೆ ತಾಲೂಕಿನ ಶಹಾಪುರ ಮೀಸಲು ಅರಣ್ಯ ಪ್ರದೇಶದಲ್ಲಿನ ದೇವ ವನ ಟ್ರೀ- ಪಾರ್ಕ್‌ನಲ್ಲೂ 16.12 ಕೋಟಿ ರೂ. ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ – ಸಂರಕ್ಷಣಾತ್ಮಕ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೀದರ ನಗರಸಭೆ ಮೇಲ್ದರ್ಜೆಗೆ

ರಾಯಚೂರು: ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆ ಮೂಲಕ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಸದ್ಯಕ್ಕೆ ರಾಯಚೂರು ನಗರಸಭೆಯಲ್ಲಿ 35 ವಾರ್ಡ್ಗಳಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಬಜೆಟ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿತ್ತು. ಆದರೆ, ಆಗ ಅನುಷ್ಠಾನಗೊಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದ್ದು, 2025ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಪಾಲಿಕೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next