ಬೆಂಗಳೂರು: ಒಂದೆಡೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಾಚನೆ ಸಂಬಂಧ ವರಿಷ್ಠರ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಈ ಪ್ರಕ್ರಿಯೆ ವಿಳಂಬ ಸಚಿವರು ಮತ್ತು ಸಚಿವಾಕಾಂಕ್ಷಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಈ ನಡುವೆ ಸಚಿವಾಕಾಂಕ್ಷಿಗಳು ರಾಜ್ಯಾ ಧ್ಯಕ್ಷ ನಳಿನ್ ಬಳಿ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರೆ, ಇನ್ನೊಂದೆಡೆ ಸಿಎಂ ಬಳಿ ಸ್ಥಾನಮಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಆದರೆ “ಯಾರ್ಯಾರು ಸಂಪುಟ ಸೇರಲಿದ್ದಾರೆ, ಯಾರನ್ನು ಕೈಬಿಡಬೇಕು ಎಂಬುದು ರಾಷ್ಟ್ರ ನಾಯಕರು ನಿರ್ಧರಿಸುತ್ತಾರೆ. 2-3 ದಿನದೊಳಗೆ ಈ ಗೊಂದಲಕ್ಕೆ ತೆರೆ ಬೀಳಲಿದೆ’ ಎಂದು ಯಡಿಯೂರಪ್ಪ ಅವರು ದಿಲ್ಲಿಯತ್ತ ಕೈತೋರಿಸಿದ್ದಾರೆ. ಸ್ಥಾನಮಾನಕ್ಕಾಗಿ ವಲಸಿಗರಿಗಿಂತ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳಲ್ಲೇ ಆಗ್ರಹ ಕೇಳಿಬರುತ್ತಿರುವುದು ಅನಿರೀಕ್ಷಿತ ಬೆಳವಣಿಗೆಯಾಗಿದೆ.
ಈ ಮಧ್ಯೆ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯ ದರ್ಶಿ ಬಿ.ಎಲ್. ಸಂತೋಷ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದಾರೆ. ಬೆಳಗಾವಿ ಭಾಗದ ಹಿರಿಯ ಶಾಸಕರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೆಯೇ ಸರಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಕಲ್ಪಿಸುವ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಉಮೇಶ್ ಕತ್ತಿ ಅವರು ಬಿಎಸ್‌ವೈ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಮಂಡಿಸಿದ್ದಾರೆ. ಈ ಸಂದರ್ಭ ಕೆಲವರನ್ನು ಕೈಬಿಟ್ಟು ಮೂಲ ಬಿಜೆಪಿಗರಿಗೆ ಅವಕಾಶ ನೀಡಬೇಕು. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರಕಾರದ ಮೇಲೆ ಅಥವಾ ನಾಯಕತ್ವದ ಮೇಲೆ ಪರೋಕ್ಷವಾಗಿ ಅಪನಂಬಿಕೆ ಬರುವಂತೆ ಮಾಡುತ್ತಿರುವವರನ್ನು ಸಚಿವ ಸ್ಥಾನದಿಂದ ಇಳಿಸಬೇಕು ಎಂದು ಶಾಸಕರ ತಂಡ ಸಿಎಂ ಮುಂದೆ ಬೇಡಿಕೆ ಇಟ್ಟಿದೆ.
ಈ ಸಂದರ್ಭ ಬಹಿರಂಗ ಹೇಳಿಕೆ ನೀಡಬಾರದು. ಪ್ರತ್ಯೇಕ ಸಭೆ ಅಥವಾ ಗುಂಪುಗೂಡಿ ಚರ್ಚಿಸು ವುದು ಇತ್ಯಾದಿ ಮಾಡಬಾರದು. ರಾಜ್ಯಾಧ್ಯಕ್ಷರ ಸೂಚನೆ ಪಾಲಿಸಬೇಕು ಎಂದು ಯಡಿಯೂರಪ್ಪ ಶಾಸಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಇನ್ನೆರೆಡು ಅಥವಾ ಮೂರು ದಿನಗಳಲ್ಲಿ ತಿಳಿಯಲಿದೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸದ್ಯದಲ್ಲಿ ನಿಗದಿ ಪಡಿಸಲಾಗುವುದು. ಯಾರ್ಯಾರು ಸಂಪುಟ ಸೇರಲಿದ್ದಾರೆ, ಯಾರನ್ನು ಕೈಬಿಡಬೇಕು ಎಂಬುದನ್ನು ರಾಷ್ಟ್ರ ನಾಯಕರು ನಿರ್ಧರಿಸುತ್ತಾರೆ. ಎರಡು ಮೂರು ದಿನಗಳೊಳಗೆ ಈ ಗೊಂದಲಕ್ಕೆ
ತೆರೆ ಬೀಳಲಿದೆ.
-ಬಿ.ಎಸ್. ಯಡಿಯೂರಪ್ಪ