Advertisement
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿ ನಿಂದಲೂ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಆಕಾಂಕ್ಷಿಗಳು ನಿರಂತರ ಒತ್ತಡ ಹೇರುತ್ತಲೇ ಬಂದಿದ್ದರು. ರಾಜ್ಯದಲ್ಲಿ ಮೇಲಿಂದ ಮೇಲೆ ಉಪ ಚುನಾವಣೆಗಳು ಮತ್ತಿತರ ಹಲವಾರು ಕಾರಣಗಳಿಂದ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬಂದಿದ್ದಾರೆ.
ಪ್ರಸ್ತುತ ಬೊಮ್ಮಾಯಿ ಸಂಪುಟದಲ್ಲಿ ಐದು ಸಚಿವ ಸ್ಥಾನಗಳು ಖಾಲಿ ಇದ್ದು, ವಿಧಾನಸಭೆ ಚುನಾವಣೆ ಯನ್ನು ಗಮನದಲ್ಲಿ ಇರಿಸಿಕೊಂಡು ಜಾತಿ ಮತ್ತು ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಮುಖ್ಯವಾಗಿ ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಕಾರಣರಲ್ಲಿ ಒಬ್ಬರಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಕುಡಚಿ ಶಾಸಕ ಪಿ. ರಾಜೀವ್, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರನ್ನು ಜಾತಿ-ಪ್ರಾದೇಶಿಕತೆ ಆಧಾರದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ.
Related Articles
ಸಚಿವ ಸ್ಥಾನಕ್ಕಾಗಿ ಇಷ್ಟು ದಿನ ನಾಯಕರ ಬೆನ್ನು ಬಿದ್ದಿದ್ದ ಬಹುತೇಕ ಶಾಸಕರು ಈಗ ಸಂಪುಟ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ ಹತ್ತಿರ ಇದೆ. ಇಷ್ಟು ಕಡಿಮೆ ಅವಧಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಲು ಅವಕಾಶ ದೊರೆಯದೆ ಅದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ ಶಾಸಕರಾಗಿ ಚುನಾವಣೆ ಎದುರಿಸಿದರೆ ಜನರ ಅನುಕಂಪ ಗಳಿಸಲು ಅನುಕೂಲವಾಗಲಿದೆ. ಸಚಿವರಾದರೆ ಪಕ್ಷವು ಚುನಾವಣೆಯ ಸಂದರ್ಭ ಹೆಚ್ಚಿನ ಜವಾಬ್ದಾರಿ ವಹಿಸುವುದರಿಂದ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಕೆಲವು ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ಮಾಡುವುದನ್ನೇ ಕೈಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಹೊರಟ್ಟಿಗೆ ಸಚಿವ ಸ್ಥಾನ?ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಅವರನ್ನು ಪ್ರಸ್ತುತ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಹೊರಟ್ಟಿ ಅವರು ತಮ್ಮನ್ನು ಮತ್ತೆ ಪರಿಷತ್ ಸಭಾಪತಿ ಯನ್ನಾಗಿ ಮುಂದುವರಿಸುವಂತೆ ಮಾತುಕತೆ ನಡೆಸಿಯೇ ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನಕ್ಕಿಂತ ಸಭಾಪತಿ ಸ್ಥಾನ ದೊರೆತರೆ ಮುಂದಿನ 6 ವರ್ಷ ಅಧಿಕಾರದಲ್ಲಿ ಇರಬಹುದು ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. -ಶಂಕರ ಪಾಗೋಜಿ