Advertisement
ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆ ನಂತರ ಉಂಟಾಗಿರುವ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಇದರ ಜತೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ಮೂರು ದಿನ ಕಳೆದರೂ ಖಾತೆಗಳ ಹಂಚಿಕೆಯಾಗಿಲ್ಲ. ಮೊದಲಿಗೆ ಸಚಿವರಾಗಲು ಪೈಪೋಟಿ ನಡೆಸಿದ್ದವರು ಇದೀಗ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದು ಇದಕ್ಕೆ ಕಾರಣ.
Related Articles
Advertisement
ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಜಾತಿವಾರು, ಪ್ರಾದೇಶಿಕವಾರು ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಸಂಪುಟದಲ್ಲಿ ಪ್ರಾತಿನಿಧ್ಯ, ಸಂಸದೀಯ ಕಾರ್ಯದರ್ಶಿ, ರಾಜಕೀಯ ಕಾರ್ಯದರ್ಶಿ, ನಿಗಮ ಮಂಡಳಿ ನೇಮಕ ಮಾಡಿದೆಯಾದರೂ ಇನ್ನೂ ಒಂದು ಡಜನ್‌ಗೂ ಹೆಚ್ಚು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ಇರುವುದು ತಲೆನೋವು ತಂದಿದೆ. ಸಂಪುಟ ಪುನಾರಚಣೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ, ಅತೃಪ್ತಿ ಸಹಜ. ಇದಕ್ಕಿಂತ ದೊಡ್ಡ ಅಸಮಾಧಾನವನ್ನೂ ಕಾಂಗ್ರೆಸ್ ಜೀರ್ಣಸಿಕೊಂಡಿದೆ. ಹೀಗಾಗಿ, ಪಕ್ಷಕ್ಕೆ ಡ್ಯಾಮೇಜ್ ಕಂಟ್ರೋಲ್ ಮಾಡುವ ಶಕ್ತಿಯಿದೆಯಾದರೂ ತಕ್ಷಣಕ್ಕೆ ಸ್ವಲ್ಪ ದಿನ ಮುಜುಗರ ತಪ್ಪದು. ಹೀಗಾಗಿಯೇ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್ ತಮ್ಮ ಕೋಟಾದ ಎರಡು ಸ್ಥಾನ ಭರ್ತಿ ಹಾಗೂ ಇತರೆ ನೇಮಕಾತಿಗಳಿಗೆ ತಮ್ಮ ಪಕ್ಷದ ಪಟ್ಟಿ ಸಿದ್ಧಪಡಿಸದೆ ಜಾಣ್ಮೆ ವಹಿಸಿತು. ಪಕ್ಷದಲ್ಲಿ ಸಚಿವ ಸ್ಥಾನ ಸೇರಿ ಇತರೆ ಹುದ್ದೆಗಳಿಗೆ ನೇಮಕ ಮಾಡಲೇಬೇಕು ಎಂದು ಪಟ್ಟು ಹಿಡಿಯುವವರು, ಒಂದೊಮ್ಮೆ ಮಾಡದಿದ್ದರೆ ಪಕ್ಷ ಬಿಡುವ ಧಮ್ಕಿ ಹಾಕುವವರು ಯಾರೂ ಇಲ್ಲ. ಇದನ್ನು ಅರಿತ ನಾಯಕರು ಸ್ವಲ್ಪ ದಿನ ಕಾದು ನೋಡಿ ಆಮೇಲೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲ ಕಾರ್ಯಾಚರಣೆ ಗುಮ್ಮನಂತೆ ಕಾಡುತ್ತಿರುವುದರಿಂದ ರಕ್ಷಣಾತ್ಮಕ ಆಟ ಆಡುತ್ತಿರುವ ಜೆಡಿಎಸ್, ಎರಡು ಸಚಿವ ಸ್ಥಾನ ಖಾಲಿ ಉಳಿಸಿಕೊಂಡು ರಾಜಕೀಯ ತಂತ್ರಗಾರಿಕೆ ತೋರಿದೆ. ಆದರೆ, ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನ ಸಮ್ಮಿಶ್ರ ಸರ್ಕಾರದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿ ದೆಯೋ ತಿಳಿಯದು. ಆದರೆ ಈ ವಿದ್ಯಮಾನಗಳು ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಜನ ಸರ್ಕಾರದಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆಯೇ, ಹೊರತು ಇದನ್ನೆಲ್ಲ ಅಲ್ಲ. ಇನ್ನಾದರೂ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ನಡುವಿನ ಬಿಕ್ಕಟ್ಟನ್ನು ಬಗೆಹರಿಸಿಕೊಂಡು ರಾಜ್ಯದ ಸಮಸ್ಯೆಗಳನ್ನು ಕಣ್ಣೆತ್ತಿ ನೋಡುವಂತಾಗಲಿ.