ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸರಕಾರ ಹಾಗೂ ಪಕ್ಷದಲ್ಲಿ ಮಹತ್ವದ ಬದಲಾವಣೆ ತರುವುದಕ್ಕೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಏಪ್ರಿಲ್ ತಿಂಗಳಲ್ಲಿ ಸಂಪುಟ ಸರ್ಜರಿ ನಡೆಸಿ ಆ ಬಳಿಕ ಪಕ್ಷದ ಆಯಕಟ್ಟಿನ ಸ್ಥಾನಗಳಿಗೆ ಹೊಸಬರ ನೇಮಕಕ್ಕೆ ಚಿಂತನೆ ನಡೆಯುತ್ತಿದೆ.
ಬಿಜೆಪಿ ರಾಜ್ಯ ಘಟಕದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳ ಜತೆಗೆ ರಾಜ್ಯಾಧ್ಯಕ್ಷರ ಬದಲಾವಣೆಗೂ ಚರ್ಚೆ ನಡೆಯುತ್ತಿದೆ. ಈ ಬಾರಿ ದಲಿತ ಅಥವಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕರ ಬೆನ್ನು ಬಿದ್ದ ಸಿ.ಎಂ.ಇಬ್ರಾಹಿಂ; ಜಮೀರ್-ತನ್ವೀರ್ ಸೆಳೆಯಲು ಯತ್ನ!
ಒಕ್ಕಲಿಗ ಸಮುದಾಯದಿಂದ ಇಬ್ಬರ ಹೆಸರನ್ನು ಹೈಕಮಾಂಡ್ ಪರಿಗಣಿಸಿದೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಇವರಿಬ್ಬರೂ ಸಕ್ರಿಯರಾಗಿ ಭಾಗಿಯಾಗಿದ್ದು, ರಾಷ್ಟ್ರೀಯ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಸಂಸದರೊಬ್ಬರು ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ವರಿಷ್ಠರು ಪರಿಗಣಿಸಿದ್ದಾರೆ. ಕೇಂದ್ರದಲ್ಲಿ ಸಚಿವರೂ ಆಗಿರುವ ಆ ಸಂಸದರ ಕಾರ್ಯನಿರ್ವಹಣೆ ಬಗ್ಗೆ ವರಿಷ್ಟರ ಮೆಚ್ಚುಗೆ ಇದೆ.
ಸಂಪುಟ ಸರ್ಜರಿ?: ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಮಹತ್ವದ ಸರ್ಜರಿ ನಡೆಯುವುದು ಪಕ್ಕಾ ಎಂದು ಸಿಎಂ ಕಚೇರಿ ಮೂಲಗಳು ಹೇಳುತ್ತಿವೆ. ಎಂಟು ಜನ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ಹೀಗಾಗಿ ಯುಗಾದಿ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುವುದು ದಟ್ಟವಾಗಿದೆ.