Advertisement
ವರಿಷ್ಠರ ಒಪ್ಪಿಗೆ ದೊರೆತರೆ ಭಾನುವಾರ ಇಲ್ಲವೇ ಸೋಮವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಂಭವವಿದೆ. ಮೊದಲ ಹಂತದಲ್ಲಿ ಪ್ರಭಾವಿ ಹಾಗೂ ದೈನಂದಿನ ಆಡಳಿತಕ್ಕೆ ಪೂರಕವಾದ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ತೀವ್ರಗೊಳಿಸಿದ್ದಾರೆ. ಎಲ್ಲವೂ ಪಕ್ಷದ ವರಿಷ್ಠರ ನಿಲುವಿನ ಮೇಲೆ ಆಧಾರಿತವಾಗಿದೆ.
Related Articles
Advertisement
ನೆರೆ ಪರಿಹಾರ ಕಾರ್ಯಕ್ಕೂ ಒತ್ತು: ರಾಜ್ಯದಲ್ಲಿ ಪ್ರಸ್ತುತ ಪ್ರವಾಹ ಉಂಟಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ವೇಳೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಗಳನ್ನು ಕೈಗೊಳ್ಳುವ ಜತೆಗೆ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಬೇಕಾದ ಅನಿವಾ ರ್ಯತೆ ಇದೆ. ಹಾಗಾಗಿ ಪ್ರತಿಕೂಲ ಪರಿಸ್ಥಿತಿ ನಿರ್ವಹಿಸಲು ಸಂಪುಟದಲ್ಲಿ ಸಮರ್ಥರಿಗೆ ಆದ್ಯತೆ ಸಿಗುವ ಲೆಕ್ಕಾಚಾರವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗುರುವಾರ ದೆಹಲಿಗೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ರಾತ್ರಿ ದೆಹಲಿಗೆ ತೆರಳಲಿದ್ದು, ಶುಕ್ರವಾರ ಪ್ರಧಾನಿ ಸೇರಿದಂತೆ ಕೇಂದ್ರದ ಹಲವು ಸಚಿವರನ್ನು ಭೇಟಿಯಾ ಗಲಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ದಂತೆ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಂದೆರಡು ದಿನದಲ್ಲಿ ಹಸಿರು ನಿಶಾನೆ ತೋರುವ ವಿಶ್ವಾಸ ವಿದೆ. ರಾಜ್ಯ ನಾಯ ಕರು ಭಾನುವಾರ ಇಲ್ಲವೇ ಸೋಮವಾರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸುವ ಬಗ್ಗೆ ಚಿಂತಿಸಿದ್ದಾರೆ.
ಸಚಿವ ಸ್ಥಾನಕ್ಕೆ ಸಕಲ ಪ್ರಯತ್ನ: ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆ ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಲಾಬಿ ತೀವ್ರಗೊಳಿಸಿದ್ದಾರೆ. ಕೆಲವರು ಸಿಎಂ ಯಡಿಯೂರಪ್ಪ ಅವರ ಬೆನ್ನಿಗೆ ಬಿದ್ದಿದ್ದರೆ ಇನ್ನೂ ಕೆಲವರು ದೆಹಲಿ ಮಟ್ಟದಲ್ಲಿ ಪ್ರಭಾವ ಬಳಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಕೆಲವರು ಸಚಿವ ಸ್ಥಾನದ ಜತೆಗೆ ಇಂತದ್ದೇ ಖಾತೆ ನೀಡಿದರೆ ಸೂಕ್ತ ಎಂದು ಹೇಳಲಾರಂಭಿಸಿದ್ದಾರೆ.
ಹಿಂದೆ ನಿರ್ವಹಿಸಿದ ಖಾತೆ ನೀಡಿದರೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವನ್ನು ಕೆಲ ಹಿರಿಯ ಹಾಗೂ ಪ್ರಭಾವಿ ಸಮುದಾಯಗಳ ಶಾಸಕರು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಉಸ್ತುವಾರಿ ಜಿಲ್ಲೆ ಸೇರಿದಂತೆ ನಿರೀಕ್ಷೆಯಲ್ಲಿರುವ ಖಾತೆಯನ್ನೇ ಹಂಚಿಕೆ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಜಾತಿ, ಪ್ರಾದೇಶಿಕತೆ, ಸಂಘಟನೆ ಇತರೆ ಅಂಶಗಳ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
* ಎಂ. ಕೀರ್ತಿಪ್ರಸಾದ್