Advertisement

ಸಚಿವ ಸಂಪುಟ ವಿಸ್ತರಣೆ: ಹಾವೇರಿ ಶಾಸಕರ ಪೈಪೋಟಿ

06:47 AM Jun 10, 2019 | Team Udayavani |

ಹಾವೇರಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಜೂ.12ಕ್ಕೆ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಶುರುವಾಗಿದೆ. ಜಿಲ್ಲೆಯ ಶಾಸಕರಾದ ಆರ್‌. ಶಂಕರ್‌ ಹಾಗೂ ಬಿ.ಸಿ. ಪಾಟೀಲ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು. ಈ ಇಬ್ಬರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದೇ ಕುತೂಹಲಕ್ಕೆ ಕಾರಣ.

Advertisement

ಸಂಪುಟ ವಿಸ್ತರಣೆಯಲ್ಲಿ ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್‌. ಶಂಕರ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದು ನಿಜವಾದರೆ, ಆರ್‌. ಶಂಕರ್‌ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿ ಸಚಿವ ಸ್ಥಾನ ಪಡೆದಂತಾಗುತ್ತದೆ. ಕೆಪಿಜೆಪಿಯಿಂದ ಗೆದ್ದು ಮೈತ್ರಿ ಸರ್ಕಾರವನ್ನು ಬೆಂಬಲಿಸಿದ ಶಂಕರ್‌ಗೆ ಸರ್ಕಾರದ ಮೊದಲ ಸಂಪುಟದಲ್ಲಿಯೇ ಅರಣ್ಯ ಖಾತೆ ನೀಡಲಾಗಿತ್ತು.

ಆದರೆ, ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ ಅವರಿಂದ ಸಚಿವ ಸ್ಥಾನ ವಾಪಸ್‌ ಪಡೆದುಕೊಂಡಿತ್ತು. ಇದರಿಂದ ಬೇಸತ್ತ ಶಂಕರ್‌ ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿದ್ದರೂ ಅವರ ಅಭಿಮಾನಿಗಳು ಬಹಿರಂಗವಾಗಿಯೇ ಬಿಜೆಪಿ ಬೆಂಬಲಿಸಿದ್ದರು. ಈಗ ಕಾಂಗ್ರೆಸ್‌ ಸಿ.ಎಸ್‌. ಶಿವಳ್ಳಿ ನಿಧನಾ ನಂತರ ಖಾಲಿ ಇದ್ದ ಸಚಿವ ಸ್ಥಾನವನ್ನು ಶಂಕರ್‌ಗೆ ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಬಿ.ಸಿ. ಪಾಟೀಲ ಬಿಸಿ: ಸಚಿವಾಕಾಂಕ್ಷಿಗಳಲ್ಲಿ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲರೂ ಪ್ರಮುಖರಾಗಿದ್ದಾರೆ. ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರಾಗಿರುವ ಇವರು ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿ. ಪ್ರತಿ ಬಾರಿಯೂ ಅವರಿಗೆ ಅವಕಾಶ ಕೈ ತಪ್ಪಿದಾಗೆಲ್ಲಾ, ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ.

ಮೊದಲ ಸಂಪುಟ ರಚನೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಚಿವ ಸ್ಥಾನ ವಂಚಿತ ಬಿ.ಸಿ. ಪಾಟೀಲ ಬಿಜೆಪಿಗೆ ಹೋಗುತ್ತಾರೆಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ, ಸ್ವತಃ ಪಾಟೀಲರೇ ಇದನ್ನು ನಿರಾಕರಿಸಿ, ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸುತ್ತಲೇ ಬಂದಿದ್ದರು. ಹೀಗಾಗಿ ಈ ಬಾರಿ ಅವರಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

Advertisement

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಬಿ.ಸಿ. ಪಾಟೀಲ ಒಬ್ಬರೇ ಗೆದ್ದಿರುವುದರಿಂದ ಸಹಜವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಕ್ತಿ ಉಳಿಸಿಕೊಳ್ಳಲು ಅವರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬಹುದೆಂಬ ಲೆಕ್ಕಾಚಾರ ಈ ಹಿಂದಿನಿಂದಲೂ ನಡೆದಿದೆ. ಆದರೆ, ಹಲವು ಬಾರಿ ಈ ಲೆಕ್ಕಾಚಾರ ತಲೆಕೆಳಗಾಗುತ್ತಲೇ ಬಂದಿದೆ. ಈ ಬಾರಿಯಾದರೂ ಇದು ನಿಜವಾಗುತ್ತದೋ ಅಥವಾ ಮತ್ತೆ ಕೈ ತಪ್ಪುತ್ತದೋ ಎಂಬುದು ಸದ್ಯದ ಕುತೂಹಲ.

ಸಂಪುಟ ವಿಸ್ತರಣೆಯಲ್ಲಿ ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ. ಈ ಹಿಂದೆಯೂ ಕಾಂಗ್ರೆಸ್‌ ತಾನಾಗಿಯೇ ಕರೆದು ಅವರಿಗೆ ಸಚಿವ ಸ್ಥಾನ ನೀಡಿತ್ತು. ಈಗ ಮತ್ತೆ ತಾನಾಗಿಯೇ ಕರೆದು ಸಚಿವ ಸ್ಥಾನ ನೀಡುತ್ತಿದೆ. ರಾಜಕಾರಣದಲ್ಲಿ ಇವೆಲ್ಲವೂ ಸಾಮಾನ್ಯ.
-ರಾಜು ಅಡಿವೆಪ್ಪನವರ, ಕೆಪಿಜೆಪಿ, ಜಿಲ್ಲಾಧ್ಯಕ್ಷ

ಕಾಂಗ್ರೆಸ್‌ನ ಏಕೈಕ ಶಾಸಕರಾಗಿರುವ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ಈ ಹಿಂದೆ ಕಾರಣಾಂತರದಿಂದ ಕೈತಪ್ಪಿದೆ. ಈ ಬಾರಿ ಅವರಿಗೆ ಅವಕಾಶ ಸಿಗುತ್ತದೆಂಬ ಭರವಸೆಯಿದೆ. ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಡ ಹಾಕಿದ್ದು, ಅವರೂ ಸಕಾರಾತ್ಮಕ ಭರವಸೆ ನೀಡಿದ್ದಾರೆ.
-ಎಂ.ಎಂ. ಹಿರೇಮಠ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next