ಬೆಂಗಳೂರು: ಶನಿವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಜೆ ವೇಳೆಗೆ ಖಾತೆ ಹಂಚಿಕೆಯಾಗಲಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಿಂದ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಳೆ (ಶನಿವಾರ) ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸಮಯವೂ ನಿಗದಿಯಾಗಿದೆ. ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಾಲ್ಕೈದು ಸಚಿವ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಲಾಗುವುದು. ಸಂಪುಟವು ಹಿರಿಯರು ಮತ್ತು ಯುವಕರ ಮಿಶ್ರಣವಾಗಿರಲಿದೆ. ನಾಲ್ಕೈದು ಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಭರ್ತಿ ಮಾಡಲಾಗುವುದು” ಎಂದು ಮುನಿಯಪ್ಪ ಹೇಳಿದರು.
ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕರು ಪಕ್ಷದ ಹೈಕಮಾಂಡ್ ಮುಂದೆ ಏನಾದರೂ ಬೇಡಿಕೆ ಇಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ,”ಈ ಹೊತ್ತಿನಲ್ಲಿ ಏನನ್ನೂ ಹೇಳುವುದು ಕಷ್ಟ” ಎಂದರು.ಆದಾಗ್ಯೂ, ”ನಮಗೆ ಹಿರಿಯರು ಮತ್ತು ಯುವಕರು ಬೇಕು. ಇವೆರಡರ ಸಮತೋಲನವನ್ನು ನಾವು ಮಾಡಬೇಕಾಗಿದೆ,ಖಾತೆಗಳ ಬಗ್ಗೆ ಇನ್ನೂ ನಿಗದಿಯಾಗಿಲ್ಲ. ನಾಳೆ ನಿರ್ಧರಿಸಲಾಗುವುದು. ಸಂಜೆಯೊಳಗೆ ಪ್ರಕಟಿಸಬೇಕು”ಎಂದರು.
ಮಾಜಿ ಕೇಂದ್ರ ಸಚಿವ ಮತ್ತು ಏಳು ಬಾರಿ ಲೋಕಸಭೆ ಸದಸ್ಯರಾಗಿರುವ ದೇವನಹಳ್ಳಿ ಶಾಸಕ ಮುನಿಯಪ್ಪ ಅವರು ಮೇ 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
34 ಮಂದಿ ಸಚಿವರಾಗಲು ಸಾಧ್ಯವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 10 ಹುದ್ದೆಗಳನ್ನು ಇದುವರೆಗೆ ಭರ್ತಿ ಮಾಡಲಾಗಿದ್ದು, 24 ಹುದ್ದೆಗಳು ಖಾಲಿ ಇವೆ.ಡಾ.ಜಿ.ಪರಮೇಶ್ವರ, ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಮತ್ತು ಬಿ.ಝಡ್. ಜಮೀರ್ ಅಹಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಯುತ್ತಿದ್ದು, ತಮ್ಮ ಉಮೇದುವಾರಿಕೆಯ ಮೇಲೆ ಪ್ರಭಾವ ಬೀರಲು ಹಲವು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.