Advertisement

ಈಗ ಎಲ್ಲರನ್ನೊಳಗೊಂಡ ಸಂಪುಟ: ಸಬ್‌ಕಾ ವಿಕಾಸ್‌ ಧ್ಯೇಯದೊಂದಿಗೆ ಪಿಎಂ ಮೋದಿ ಸಂಪುಟ ವಿಸ್ತರಣೆ

01:56 AM Jul 08, 2021 | Team Udayavani |

ಜಾತಿ, ಲಿಂಗ, ಭೌಗೋಳಿಕತೆ, ಅನುಭವ ಸೇರಿದಂತೆ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು, “ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌’ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಹೊಸ ಸಂಪುಟದಲ್ಲಿ ಪರಿಶಿಷ್ಟ ಜಾತಿಯ 12 ಮಂದಿ, ಪರಿಶಿಷ್ಟ ವರ್ಗಗಳ 8 ಮಂದಿ, ಇತರ ಹಿಂದುಳಿದ ವರ್ಗಗಳ 27 ಮಂದಿ ಸ್ಥಾನ ಪಡೆದಿದ್ದಾರೆ. ಹೊಸ ಹಾಗೂ ಹಳೆಯ ಮುಖಗಳನ್ನು ಸಂಪುಟಕ್ಕೆ ಸೇರಿಸಿರುವ ಪ್ರಧಾನಿ ಮೋದಿ, ಈ ಬಾರಿ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, 11 ಮಂದಿ ಮಹಿಳೆಯರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

Advertisement

ವಯಸ್ಸು
– ಇಡೀ ಸಂಪುಟದ ಸರಾಸರಿ ವಯಸ್ಸು ಈಗ 58 ವರ್ಷಗಳು.
– 6 ಕ್ಯಾಬಿನೆಟ್‌ ಸಚಿವರೂ ಸೇರಿದಂತೆ 14 ಸಚಿವರು 50 ವರ್ಷಕ್ಕಿಂತ ಕೆಳಗಿನವರು
– ಅನುಭವ: 46 ಮಂದಿಗೆ ಕೇಂದ್ರ ಸಚಿವರಾಗಿ ಅನುಭವವಿದ್ದರೆ, 23 ಮಂದಿ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಸದರಾದ ಅನುಭವ ಹೊಂದಿದ್ದಾರೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳು, 8 ಮಂದಿ ಮಾಜಿ ಸಹಾಯಕ ಸಚಿವರು ಮತ್ತು 39 ಮಂದಿ ಮಾಜಿ ಶಾಸಕರಾಗಿ ಅನುಭವ ಇರುವವರು.
– ಒಟ್ಟಾರೆ ಕೇಂದ್ರ ಸಂಪುಟದಲ್ಲೀಗ 13 ವಕೀಲರು, 6 ವೈದ್ಯರು, 5 ಎಂಜಿನಿಯರ್‌ಗಳು, 7 ನಾಗರಿಕ ಸೇವಾ ಅಧಿಕಾರಿಗಳಿದ್ದಾರೆ
– ಭೌಗೋಳಿಕ ವಿಚಾರಕ್ಕೆ ಬಂದರೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಈಶಾನ್ಯ ಭಾಗದ ಐವರು ಸಚಿವರು ಸಂಪುಟ ಸೇರಿದಂತಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ 12 ಸಚಿವರು
ಯಾವೆಲ್ಲ ರಾಜ್ಯಗಳಿಗೆ ಸೇರಿದವರು?
ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಕರ್ನಾಟಕ, ರಾಜಸ್ಥಾನ, ತಮಿಳುನಾಡು (8 ರಾಜ್ಯಗಳು).
ಯಾವ ಸಮುದಾಯ?: ಚಾಮರ್‌-ರಾಮ್‌ದಾಸಿಯಾ, ಖಾತಿಕ್‌, ಪಾಸಿ, ಕೋರಿ, ಮಾದಿಗ, ಮಹರ್‌, ಅರುಂಧತಿ ಯಾರ್‌, ಮೇಘವಾಲ್‌, ರಾಜ್‌ಬೋನ್ಶಿ, ಮತುವಾ- ನಾಮಶೂದ್ರ, ಧಂಗಾರ್‌, ದಸುಧ್‌ (12 ಸಮುದಾಯಗಳು)
ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಸಂಪುಟ ಸಚಿವರು.

ಪ.ವರ್ಗಗಳಿಗೆ ಸೇರಿದ 8 ಸಚಿವರು
ಯಾವೆಲ್ಲ ರಾಜ್ಯಗಳಿಗೆ ಸೇರಿದವರು?
ಅರುಣಾಚಲ ಪ್ರದೇಶ, ಝಾರ್ಖಂಡ್‌, ಛತ್ತೀಸ್‌ಗಢ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ (8 ರಾಜ್ಯಗಳು).
ಯಾವ ಸಮುದಾಯ?
ಗೋಂಡ್‌, ಸಂತಾಲ್‌, ಮಿಜಿ, ಮುಂಡಾ, ಟೀ ಟ್ರೈಬ್‌, ಕೋಕನಾ, ಸೋನೋವಾಲ್‌-ಕಚಾರಿ
– 3 ಎಸ್‌ಟಿ ಸಂಪುಟ ಸಚಿವರು

ಪ್ರಾದೇಶಿಕ ಮನ್ನಣೆ
ರಾಜ್ಯಗಳೊಳಗೂ ಪ್ರಾದೇಶಿಕ ಮನ್ನಣೆ ನೀಡಿ ಸಚಿವರನ್ನು ಆಯ್ಕೆ ಮಾಡಲಾಗಿದೆ.
ಉತ್ತರಪ್ರದೇಶ: ಪೂರ್ವಾಂಚಲ, ಅವಧ್‌, ಬ್ರಜ್‌, ಬುಂದೇಲ್‌ಖಂಡ್‌, ರೋಹಿಲಾಖಂಡ್‌, ಪಶ್ಚಿಮ ಪ್ರದೇಶ, ಹರಿತ್‌ ಪ್ರದೇಶ
ಮಹಾರಾಷ್ಟ್ರ: ಕೊಂಕಣ, ದೇಶ್‌, ಖಂದೇಶ್‌, ಮರಾಠವಾಡ, ವಿದರ್ಭ
ಗುಜರಾತ್‌: ಸೌರಾಷ್ಟ್ರ, ಉತ್ತರ, ದಕ್ಷಿಣ ಮತ್ತು ಮಧ್ಯ ಗುಜರಾತ್‌
ಕರ್ನಾಟಕ : ಮಧ್ಯ ಕರ್ನಾಟಕ, ಬೆಂಗಳೂರು, ಹೈದರಾಬಾದ್‌ ಕರ್ನಾಟಕ, ಕರಾವಳಿ ಕರ್ನಾಟಕ.
ಪಶ್ಚಿಮ ಬಂಗಾಲ: ಪ್ರಸಿಡೆನ್ಸಿ, ಮೇದಿನಿಪುರ ಮತ್ತು ಜಲಪಾಯಿಗುರಿ
ಮಧ್ಯಪ್ರದೇಶ: ಚಂಬಲ್‌, ಸತು³ರ, ಕೇಂದ್ರ ಮಧ್ಯಪ್ರದೇಶ
ಈಶಾನ್ಯ: ಅಸ್ಸಾಂ, ಅರುಣಾಚಲ, ಮಣಿಪುರ ಮತ್ತು ತ್ರಿಪುರಾದ ಐವರು ಸಚಿವರು

Advertisement

16 ಮಂದಿ ಮೊದಲ ಬಾರಿಗೆ ಸಂಸದರು
ಕೇಂದ್ರ ಸಂಪುಟಕ್ಕೆ ಒಟ್ಟು ನಲವತ್ತಮೂರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ 36 ಮಂದಿ ನೂತನ ಸಚಿವರೇ ಆಗಿದ್ದಾರೆ. ಈ ಪೈಕಿ 16 ಮಂದಿ ಮೊದಲ ಬಾರಿಗೆ ಸಂಸದರಾಗಿದ್ದಾರೆ ಎನ್ನುವುದು ಗಮನಾರ್ಹ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಡಾ.ಎಲ್‌.ಮುರುಗನ್‌ (44) ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಲ್ಲ. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 17 ಮಂದಿ ರಾಜ್ಯಸಭೆಯ ಸದಸ್ಯರು ಎನ್ನುವುದು ಗಮನಾರ್ಹ. ಬಿಹಾರದ ಮಾಜಿ ಡಿಸಿಎಂ, ರಾಜ್ಯಸಭೆ ಸದಸ್ಯ ಸುಶೀಲ್‌ ಕುಮಾರ್‌ ಮೋದಿ, ಟಿಎಂಸಿ ತ್ಯಜಿಸಿ ಬಿಜೆಪಿಗೆ ಸೇರಿದ ಮಾಜಿ ಸಚಿವ ದಿನೇಶ್‌ ತ್ರಿವೇದಿ ಹೆಸರುಗಳು ಚಾಲ್ತಿಯಲ್ಲಿದ್ದರೂ, ಸಂಪುಟಕ್ಕೆ ಸೇರ್ಪಡೆಯಾಗಿಲ್ಲ.

ಇಂದು ಸಂಪುಟ ಸಭೆ
ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಮತ್ತು ಕೇಂದ್ರ ಸಂಪುಟದ ಪೂರ್ಣ ಮಂತ್ರಿಮಂಡಲದ ಸಭೆ ಗುರುವಾರ ನಡೆಯಲಿದೆ.ಹೀಗಾಗಿ, ಒಟ್ಟು ಎರಡು ಪ್ರತ್ಯೇಕ ಸಭೆ ನಡೆಯಲಿದೆ. ಇದರ ಜತೆಗೆ ನೂತನ ಸಚಿವರಿಗಾಗಿ ಪ್ರಧಾನಿಯವರು ಚಹಾಕೂಟ ಕೂಡ ಆಯೋಜಿಸಿದ್ದಾರೆ.

ಸರಾಸರಿ ವಯಸ್ಸು 58
ಪ್ರಧಾನಿ ಮೋದಿಯವರ ಸಂಪುಟದಲ್ಲಿ ಹಾಲಿ ಇರುವ ಸರಾಸರಿ ಸಚಿವರ ವಯಸ್ಸೆಂದರೆ 58. ಹೊಸ ಸಚಿವ ಸಂಪುಟದಲ್ಲಿ ಅತ್ಯಂತ ಕನಿಷ್ಠ ವಯಸ್ಸಿನ ಸಚಿವರೆಂದರೆ ನಿಸಿತ್‌ ಪ್ರಾಮಾಣಿಕ್‌ (35). 12 ಮಂದಿ ಸಚಿವರು 38 ವರ್ಷ ವಯೋಮಿತಿಯಿಂದ 49 ವರ್ಷ ವಯೋಮಿತಿ ವರೆಗಿನ ಸಚಿವರು ಇದ್ದಾರೆ. ಇದುವರೆಗೆ ಸಂಪುಟದಲ್ಲಿದ್ದ ಸಚಿವರ ಸರಾಸರಿ ವಯಸ್ಸು 61 ಆಗಿತ್ತು. ಅದು ಈಗ 58 ಆಗಿದೆ. ಬುಧವಾರ ಪ್ರಮಾಣ ಸ್ವೀಕರಿಸಿದ 43 ಸಚಿವರ ಸರಾಸರಿ ವಯೋಮಿತಿ 56 ವರ್ಷ.

ಚುನಾವಣೆ ಅಜೆಂಡಾ
ಉತ್ತರಪ್ರದೇಶ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಸಂಪುಟ ಪುನಾರಚನೆಯಲ್ಲಿ ಸ್ಪಷ್ಟವಾಗಿದೆ. ಈ ರಾಜ್ಯದ 7 ಮಂದಿಯನ್ನು ಸಂಪುಟಕ್ಕೆ ಸೇರಿಸಲಾಗಿದೆ. ಈ ಪೈಕಿ 5 ಮಂದಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಬ್ರಾಹ್ಮಣ, ಎಸ್‌ಸಿ ಸಮುದಾಯದ ತಲಾ ಒಬ್ಬರಿಗೆ ಸ್ಥಾನ ಕಲ್ಪಿಸಲಾಗಿದೆ. ಬ್ರಾಹ್ಮಣ ಸಮುದಾಯವು ಬಿಜೆಪಿಯಿಂದ ದೂರವಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಖೇರಿ ಕ್ಷೇತ್ರದ ಸಂಸದ ಅಜಯ್‌ ಮಿಶ್ರಾ ಅವರಿಗೆ ಸ್ಥಾನ ಕಲ್ಪಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದ್ದ ಕುರ್ಮಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯದ ಋಣ ತೀರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next