Advertisement
ಪ್ರಧಾನಿ ಎಲ್ಲರ ನಿರೀಕ್ಷೆಗಳನ್ನು ಮೀರಿ ರಾಜ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದು, ವಿಶೇಷವಾಗಿ ಜಾತಿ ಮತ್ತು ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಿರುವುದು ಭವಿಷ್ಯದಲ್ಲಿ ಎಲ್ಲ ಸಮುದಾಯದವರನ್ನು ಸೆಳೆಯಬೇಕೆಂಬ ಮುಂದಾಲೋಚನೆ ಬಿಜೆಪಿ ಹಾಕಿಕೊಂಡಂತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಆದ್ಯತೆ ದೊರೆಯುತ್ತದೆ ಎಂಬ ಬಹುತೇಕರ ಲೆಕ್ಕಾಚಾರ ಸುಳ್ಳಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಿದ್ದು, ರಾಘವೇಂದ್ರ ಕೇಂದ್ರ ಸಂಪುಟ ಸೇರಿದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಸ್ವಲ್ಪ ಮಟ್ಟಿನ ನಿರಾಸೆಯಾದಂತಾಗಿದೆ.
ವಿಶೇಷವಾಗಿ ಮಧ್ಯ ಕರ್ನಾಟಕ ವನ್ನೂ ಅವಗಣಿಸದ ಪ್ರಧಾನಿ, ಚಿತ್ರದುರ್ಗ ಸಂಸದ ಆನೇಕಲ್ ಮೂಲದ ಎ. ನಾರಾಯಣ ಸ್ವಾಮಿಗೆ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರು ಸಹಿತ ಹಳೆ ಮೈಸೂರು ಭಾಗದಲ್ಲಿ ದಲಿತ ಎಡಗೈ ಸಮುದಾಯವನ್ನು ಪಕ್ಷದ ಕಡೆಗೆ ಸೆಳೆಯುವ ತಂತ್ರ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಅದೃಷ್ಟ ಒಲಿದಿದೆ. ಕೇಂದ್ರ ರಸಗೊಬ್ಬರ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡ ಅವರನ್ನು ಸಂಪುಟದಿಂದ ಕೈ ಬಿಟ್ಟು, ಕರಾವಳಿ ಮೂಲದ ಹಾಗೂ (ಸದಾನಂದ ಗೌಡರದೇ ಸಮುದಾಯದ) ಒಕ್ಕಲಿಗ ಸಮುದಾಯಕ್ಕೆ ಸೇರಿದ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಾದೇಶಿಕತೆ ಹಾಗೂ ಜಾತಿ ಎರಡನ್ನೂ ಪರಿಗಣಿಸಿ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಕರಾವಳಿ, ಮಲೆನಾಡು ಹಾಗೂ ಒಕ್ಕಲಿಗ ಸಮುದಾಯ ಎಲ್ಲವನ್ನೂ ತಮ್ಮತ್ತ ಸೆಳೆಯುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ.
Advertisement
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯದ ಕೋಟಾದಡಿ ಸಚಿವ ಸ್ಥಾನ ನೀಡಲಾಗಿದೆ. ಮೋದಿಯವರ ಆಪ್ತ ತಂಡದಲ್ಲಿ ರಾಜೀವ್ ಚಂದ್ರಶೇಖರ್ ಗುರುತಿಸಿಕೊಂಡಿದ್ದು, ಭವಿಷ್ಯದಲ್ಲಿ ಕೇರಳದಲ್ಲಿ ಪಕ್ಷವನ್ನು ಬಲಪಡಿಸುವ ಲೆಕ್ಕಾಚಾರ ಇವರ ಹಿಂದಿದೆ ಎನ್ನಲಾಗುತ್ತಿದೆ.
ಚುನಾವಣೆಗೆ ಅನುಕೂಲಸಮತೋಲಿತ ಪುನಾರಚನೆಯಿಂದ ಮುಂಬರುವ ಜಿಲ್ಲೆ, ತಾಲೂಕು ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಆಯಾ ಭಾಗದಲ್ಲಿ ಸಂಘಟಿಸಲು ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ದಲಿತ ಸಿಎಂ ವಿಷಯವನ್ನು ಕಾಂಗ್ರೆಸ್ ಆಗಾಗ ಪ್ರಸ್ತಾವಿಸುತ್ತಿದ್ದು, ಅದಕ್ಕೆ ಉತ್ತರ ಎನ್ನುವಂತೆ ದಲಿತ ಸಮುದಾಯದ ಥಾವರ್‌ಚಂದ್ ಗೆಹೊÉàಟ್ ಅವರನ್ನು ರಾಜ್ಯದ ರಾಜ್ಯಪಾಲರನ್ನಾಗಿ ಮಾಡಿರುವುದು ಹಾಗೂ ಎ. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಬಗ್ಗೆ ಇರುವ ದಲಿತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರ ಬರಲು ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. – ಶಂಕರ ಪಾಗೋಜಿ