Advertisement

“ಸಹಕಾರ ವೃದ್ಧಿ’ಗೆ ಕೇಂದ್ರದ ಸಹಕಾರ; ಐದು ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್‌ ಸ್ಥಾಪನೆ

09:31 PM Feb 15, 2023 | Team Udayavani |

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷ ಪ್ರಾಥಮಿಕ ಕೃಷಿ ಸಹಕಾರ ಸಂಘ(ಪಿಎಸಿಎಸ್‌), ಹೈನುಗಾರಿಕೆ, ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಸ್ಥಳೀಯ ಸಂಘಗಳು ಸ್ಥಾಪನೆಯಾಗದೇ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಪಿಎಸಿಎಸ್‌ಗಳು ತಲೆ ಎತ್ತಲಿವೆ. ದೇಶದಲ್ಲಿ ಒಟ್ಟು 99,000 ಪಿಎಸಿಎಸ್‌ಗಳಿದ್ದು, ಇವುಗಳಲ್ಲಿ 63 ಸಾವಿರ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದರೆ, ದೇಶದಲ್ಲಿ ಇನ್ನೂ ಪಿಎಸಿಎಸ್‌ಗಳಿಲ್ಲದ 1.6 ಲಕ್ಷ ಗ್ರಾಪಂಗಳು ಮತ್ತು ಡೇರಿ ಸಹಕಾರ ಸಂಘಗಳಿಲ್ಲದ ಸುಮಾರು 2 ಲಕ್ಷ ಗ್ರಾಮ ಪಂಚಾಯಿತಿಗಳಿವೆ. ಇಂಥ ಗ್ರಾಪಂಗಳನ್ನು ಗುರುತಿಸಿ, ಅಲ್ಲಿ ಅವುಗಳನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ತೀರಾ ಕೆಳಹಂತದವರೆಗೂ ಪಿಎಸಿಎಸ್‌ಗಳು ಸಿಗುವಂತೆ ಮಾಡಲಾಗುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಜತೆಗೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದಿದ್ದಾರೆ.

ನಬಾರ್ಡ್‌, ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ), ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಎಫ್ಡಿಬಿ)ಗಳು ಸೇರಿ ಕಾರ್ಯಯೋಜನೆ ಮತ್ತು ಜಾರಿ ಮಾಡಲಿವೆ ಎಂದು ಅವರು ಸಂಪುಟ ಸಭೆಯ ನಂತರ ಹೇಳಿದ್ದಾರೆ.

ಕಳೆದ ವರ್ಷವಷ್ಟೇ ಪಿಎಸಿಎಸ್‌ಗಳನ್ನು 2,516 ಕೋಟಿ ರೂ. ವೆಚ್ಚದಲ್ಲಿ ಕಂಪ್ಯೂಟರೀಕರಣ ಮಾಡಲಾಗಿತ್ತು. ಇದರಲ್ಲಿ ಕೇಂದ್ರ ಸರ್ಕಾರ 1,528 ಕೋಟಿ ರೂ. ನೀಡಿತ್ತು. ಉಳಿದ ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಿದ್ದವು.

ಆಧುನೀಕರಣ:
ಹಾಲಿ ಇರುವ ಪಿಎಸಿಎಸ್‌ಗಳ ಮೂಲ ಸೌಕರ್ಯಗಳನ್ನು ಬಲವರ್ಧಿಸುವುದರ ಜತೆಗೆ, ಅವುಗಳಲ್ಲಿರುವ ಮಾಹಿತಿಗಳನ್ನು ಕಂಪ್ಯೂಟರೀಕರಣಗೊಳಿಸುವುದು, ಆದಾಯ ವೃದ್ಧಿ ಸೇರಿದಂತೆ ಗ್ರಾ.ಪಂ.ಗಳಲ್ಲಿ ಹೊಸ ಸಹಕಾರ ಸಂಘಗಳನ್ನು ಸ್ಥಾಪಿಸವುದು ಕೂಡ ಸೇರಿದೆ. ಈ ಸಂಘಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸಲು, ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕೂಡ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು ಸಚಿವ ಅನುರಾಗ್‌ ಠಾಕೂರ್‌.  ಇದರ ಜತೆಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಗೋದಾಮು, ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲು ಅನುಕೂಲವಾಗುವಂತೆ ಕೂಡ ನಿಯಮಗಳಲ್ಲಿ ಬದಲು ಮಾಡಲಾಗುತ್ತದೆ ಎಂದರು.

Advertisement

63 ಸಾವಿರ- ಸದ್ಯ ದೇಶದಲ್ಲಿ ಇರುವ ಕೃಷಿ ಸಹಕಾರ ಸಂಘಗಳು

1.6 ಲಕ್ಷ – ಸಹಕಾರ ಸಂಘಗಳಿಲ್ಲದ ಗ್ರಾಪಂಗಳು

2 ಲಕ್ಷ – ಮೀನುಗಾರಿಕೆ/ಡೇರಿಗಳಿಲ್ಲದ ಗ್ರಾಪಂಗಳು

2 ಲಕ್ಷ – ಐದು ವರ್ಷಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಹಕಾರ ಸಂಘಗಳು/ಡೇರಿಗಳು

Advertisement

Udayavani is now on Telegram. Click here to join our channel and stay updated with the latest news.

Next