ವಾಷಿಂಗ್ಟನ್: ಭಾರತವು ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವಾಗಿದ್ದು, ರಷ್ಯಾದಿಂದ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದೆ ಎಂಬ ಮಾತ್ರಕ್ಕೆ ಭಾರತದ ವಿರುದ್ಧ ನಿರ್ಬಂಧ ಗಳನ್ನು ಹೇರುವುದು ಮೂರ್ಖತನದ ನಿರ್ಧಾರವಾಗುತ್ತದೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದರು ಬೈಡೆನ್ ಆಡಳಿತಕ್ಕೆ ಹೇಳಿದ್ದಾರೆ.
ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾದೊಂದಿಗೆ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ಯಾವುದೇ ದೇಶದ ಮೇಲೆ ಅಮೆ ರಿಕವು ಕಾಟ್ಸಾ ಕಾಯ್ದೆಯ ಅನ್ವಯ ನಿರ್ಬಂಧ ಹೇರುತ್ತದೆ. ಇದೊಂದು ಕಠಿನ ಕಾಯ್ದೆಯಾಗಿದೆ.
2014ರಲ್ಲಿ ಕ್ರಿಮಿಯಾವನ್ನು ಆಕ್ರಮಿಸಿದ ಹಾಗೂ 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಸ್ತಕ್ಷೇಪ ಮಾಡಿರುವ ರಷ್ಯಾ ವಿರುದ್ಧ ಈಗಾಗಲೇ ಅಮೆರಿಕ ನಿರ್ಬಂಧ ಹೇರಿದೆ. ಈಗ ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರ ನಿಂತಿರುವ ಭಾರತದ ವಿರುದ್ಧವೂ ಬೈಡೆನ್ ಆಡಳಿತ ನಿರ್ಬಂಧ ಹೇರಲಿದೆ ಎಂಬ ಬಗ್ಗೆ ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಿಪಬ್ಲಿಕನ್ ಸಂಸದ ಟೆಡ್ ಕ್ರೂಸ್, ಇದು ನಿಜವೆಂದಾದಲ್ಲಿ ಇದೊಂದು ವಿವೇಕರಹಿತ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಭಾರತವು ಹಲವು ಕ್ಷೇತ್ರಗಳಲ್ಲಿ ನಮ್ಮ ಮಿತ್ರರಾಷ್ಟ್ರ ವಾಗಿದೆ. ಅಲ್ಲದೇ ಎರಡೂ ದೇಶಗಳ ನಡುವಿನ ಬಾಂಧವ್ಯವು ಇತ್ತೀಚಿನ ವರ್ಷಗಳಲ್ಲಿ ಗಟ್ಟಿಯಾಗಿದೆ. ಈಗ ಬೈಡೆನ್ ಆಡಳಿತವು ನಿರ್ಬಂಧದ ನಿರ್ಧಾರ ಹೇರಿದರೆ ನಾವು ಮತ್ತೆ ಹಿಂದಕ್ಕೆ ಹೋದಂತೆ ಎಂದಿದ್ದಾರೆ.