ಮುಜಾಫರ್ ನಗರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 20ರಂದು ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟು ಹನ್ನೊಂದು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.
ಮುಜಾಫರ್ ನಗರ್ ಪ್ರದೇಶದಲ್ಲಿ ಘರ್ಷಣೆ ಮತ್ತು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸುಮಾರು 73 ಜನರು ಜೈಲಿನಲ್ಲಿದ್ದು, ಸ್ಥಳೀಯ ಪೊಲೀಸರು ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಹಲವು ಅಮಾಯಕರನ್ನು ಜೈಲುಕಂಬಿ ಹಿಂದೆ ತಳ್ಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಿಸೆಂಬರ್ 20ರಂದು ನಡೆದಿದ್ದ ಘರ್ಷಣೆ, ಗಲಭೆ ಪ್ರಕರಣದಲ್ಲಿ ಎಂಪ್ಲಾಯ್ ಮೆಂಟ್ ಕಚೇರಿಯ ಹಿರಿಯ ಕ್ಲರ್ಕ್ ಮೊಹಮ್ಮದ್ ಫಾರುಖ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದರು. ನಂತರ ಫಾರೂಖ್ ಮನೆಯವರು ಪೊಲೀಸ ಠಾಣೆಗೆ ಭೇಟಿ ನೀಡಿ ಗಲಾಟೆ ನಡೆದ ದಿನ ಕಚೇರಿಯಲ್ಲೇ ಇದ್ದ ಬಗ್ಗೆ ದಾಖಲೆ ನೀಡಿದ ನಂತರ ಫಾರೂಖ್ ಅವರನ್ನು ಬಿಡುಗಡೆಗೊಳಿಸಿರುವುದಾಗಿ ವರದಿ ತಿಳಿಸಿದೆ.
ಅತೀಖ್ ಅಹ್ಮದ್, ಶೋಯಿಬ್ ಮತ್ತು ಖಾಲಿದ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇವರು ಘರ್ಷಣೆ ನಡೆದ ದಿನ ಅನಾರೋಗ್ಯ ಪೀಡಿತ ಸಂಬಂಧಿಯನ್ನು ಮೀರತ್ ಆಸ್ಪತ್ರೆಗೆ ಕರೆದೊಯ್ದಿದ್ದ ಕುರಿತು ದಾಖಲೆ ನೀಡಿದ ನಂತರ ಬಿಡುಗಡೆಗೊಳಿಸಿರುವುದಾಗಿ ವರದಿ ವಿವರಿಸಿದೆ.
ಬಂಧನಕ್ಕೊಳಗಾದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿದ ನಂತರ ಎಲ್ಲಾ ನಾಲ್ವರು ಗಲಭೆಯಲ್ಲಿ ಶಾಮೀಲಾಗಿಲ್ಲ ಎಂಬುದು ಪತ್ತೆಯಾಗಿತ್ತು. ನಂತರ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಆ್ಯನ್ಟಿಲ್ ತಿಳಿಸಿದ್ದಾರೆ.