ಬೆಂಗಳೂರು: ರಾಜ್ಯ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ರಾಜ್ಯದ ಜನತೆ ಸ್ಪಂದನೆ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಸಿಎಎ ಕುರಿತ ಜಾಗೃತಿ ಅಭಿಯಾನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ವ್ಯಾಪಕ ಅರಿವು ಮೂಡಿಸುವಂತೆ ಸೂಚಿಸಿದ್ದಾರೆ.
2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಪ್ರಧಾನಿ ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಯಲಹಂಕ ವಾಯುನೆಲೆಯಲ್ಲಿ ಭೇಟಿಯಾದ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುವಾಗ ಸಿಎಎ ಕುರಿತ ಪ್ರತಿಕ್ರಿಯೆ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್.ರವಿಕುಮಾರ್ ಇತರರು ಪ್ರಧಾನಿಗೆ ಬೀಳ್ಗೊಡುವ ವೇಳೆ ಉಪಸ್ಥಿತರಿದ್ದರು.
ಈ ವೇಳೆ ಸಿಎಎ ಜಾಗೃತಿ ಅಭಿಯಾನದ ಸಂಚಾಲಕ ಎನ್.ರವಿಕುಮಾರ್, ಮೋದಿಗೆ ಜಾಗೃತಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಹಿಂಸಾಚಾರ ಘಟನೆ ಹೊರತುಪಡಿಸಿದರೆ ಬೇರೆಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗಿಲ್ಲ. ಈ ನಡುವೆ ಸಿಎಎ ವಾಸ್ತವಾಂಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಭರದಿಂದ ಸಾಗಿದೆ. ಜಾಗೃತಿ ಅಭಿಯಾನವೂ ಯಶಸ್ವಿಯಾಗಿ ನಡೆದಿದ್ದು,
ಸ್ಪಂದನೆಯೂ ಉತ್ತಮವಾಗಿದೆ ಎಂಬುದಾಗಿ ಪ್ರಧಾನ ಮಂತ್ರಿಗೆ ಮಾಹಿತಿ ನೀಡಲಾಯಿತು ಎಂದು ಎನ್.ರವಿಕುಮಾರ್ ತಿಳಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಸಿಎಎ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಹಾಗೆಯೇ ಕಾಂಗ್ರೆಸ್ ಕುತಂತ್ರ, ಷಡ್ಯಂತ್ರವನ್ನು ತಿಳಿಸಬೇಕು ಎಂದು ಸೂಚಿಸಿದರು ಎಂದು ಹೇಳಿದರು.