ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಮುಸ್ಲಿಂ ಹಾಗೂ ಇತರರಿಗೆ ಯಾವುದೇ ಸಮಸ್ಯೆಯಿಲ್ಲ. ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆ ತೊಂದರೆಯಿಂದ ಆಂದೋಲನ ಆರಂಭವಾದರೆ ಅದಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತೇನೆ ಎಂದು ಯೋಗ ಗುರು ಬಾಬಾ ರಾಮದೇವ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಅನುಷ್ಠಾನದಿಂದ ಭಾರತದಲ್ಲಿರುವ ಯಾರ ಪೌರತ್ವವೂ ರದ್ದಾಗುವುದಿಲ್ಲ. ವದಂತಿ ಹಾಗೂ ಸುಳ್ಳು ಹೇಳಿಕೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಭಾರತದ ರಾಜನೀತಿ ಒಂದು ಪಕ್ಷ, ವ್ಯಕ್ತಿಯ ಮೇಲೆ ನಿಂತಿಲ್ಲ. ದೇಶದಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿನ ಪ್ರಜೆಗಳೇ ಸಾರ್ವಭೌಮರು. ಜನರ ವಿರೋಧಿ ನೀತಿಗಳನ್ನು ತಂದರೆ ಭವಿಷ್ಯವಿಲ್ಲ ಎನ್ನುವುದು ಎಲ್ಲಾ ರಾಜಕೀಯ ನಾಯಕರಿಗೆ ಅರಿವಿದೆ. ಸಿಎಎ ಬಗ್ಗೆ ಮುಸ್ಲಿಂ ಸಹೋದರರಲ್ಲಿ ಯಾವುದೇ ತಪ್ಪು ಕಲ್ಪನೆ ಬೇಡ ಎಂದರು.
ಪ್ರಧಾನಿ ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಕೆಲಸ ನಡೆದಿದೆ. ಅವರೊಂದಿಗೆ ಸಾಕಷ್ಟು ವಿಚಾರಗಳ ಕುರಿತು ಮಾತನಾಡಿದ್ದೇನೆ. ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೂ, ಮುಸ್ಲಿಂ ಎನ್ನುವ ಭಾವನೆ ಇಲ್ಲ. ಅವರು ಮುಸ್ಲಿಂ ವಿರೋಧಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಶಿವಕುಮಾರ ಶ್ರೀಗೆ ಭಾರತರತ್ನ ನೀಡಿ: ಸಮಾಜದ ಅಭಿವೃದ್ಧಿಗೆ ಸಾಧು-ಸಂತರಿಗೂ ಭಾರತರತ್ನ ನೀಡಬೇಕು. ಶಿವಕುಮಾರ ಶ್ರೀ, ಸ್ವಾಮಿ ವಿವೇಕಾನಂದ ಅವರನ್ನು ಪರಿಗಣಿಸಬೇಕು ಎಂದರು. ದೇಶದಲ್ಲಿ ಆರ್ಥಿಕ ಹಿಂಜರಿತ ಆಗಿರುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದರಿಂದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಹಿಂಜರಿತದಿಂದ ಮೇಲೆತ್ತುವ ಕೆಲಸಗಳು ತೀವ್ರಗತಿಯಲ್ಲಿ ಆಗಬೇಕು.
ಇಂತಹ ಪರಿಸ್ಥಿತಿಯಲ್ಲೂ ಪತಂಜಲಿ ಉತ್ತಮ ಸ್ಥಿತಿಯಲ್ಲಿದೆ. 4 ಸಾವಿರ ಕೋಟಿ ರೂ.ಮೌಲ್ಯದ ಕಂಪನಿಯನ್ನು ವಹಿಸಿಕೊಳ್ಳಲಾಗಿದೆ. ದೇಶ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಪ್ಪುಹಣ, ಭ್ರಷ್ಟಾಚಾರ ವಿರೋಧಿಸಿ ಅಂದು ಧ್ವನಿ ಎತ್ತಿದ್ದೆ. ಇಂದಿಗೂ ಅದೇ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಪ್ರಧಾನಿ ಮೋದಿ ಇದನ್ನು ಸಾಕಾರಗೊಳಿಸುತ್ತಾರೆ ಎನ್ನುವ ಭರವಸೆಯಿದೆ ಎಂದರು.