Advertisement

Lok Sabha Polls; ಕ್ಯಾ| ಚೌಟರು ದಾಖಲೆ ಅಂತರದಿಂದ ಗೆಲುವು ಸಾಧಿಸಲಿದ್ದಾರೆ: ಕೋಟ್ಯಾನ್‌

12:38 AM Apr 14, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಈ ಬಾರಿ ದಾಖಲೆಯ ಬಹುಮತ ದೊಂದಿಗೆ ಗೆಲ್ಲಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ 30,000 ಮುನ್ನಡೆ ಕೊಟ್ಟಿದ್ದೇವೆ. ಈ ಬಾರಿ 50,000ಕ್ಕೂ ಹೆಚ್ಚಿನ ಲೀಡ್‌ ತಂದುಕೊಡುತ್ತೇವೆ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

Advertisement

ಶನಿವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಈ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು, ನಾಯಕತ್ವ ಪ್ರಮುಖ ಸ್ಥಾನ ಪಡೆಯುತ್ತದೆಯೇ ಹೊರತು ಯಾವುದೇ ಜಾತಿ, ಧರ್ಮವಲ್ಲ ಎಂದು ಹೇಳಿದರು.

ಇಲ್ಲಿ ಜಾತಿ-ಧರ್ಮದ ಆಧಾರ ದಲ್ಲಿ ಭಿನ್ನತೆಗಳಿಗೆ ಅವಕಾಶವಿಲ್ಲ. ಜನರನ್ನು ಮರುಳು ಮಾಡಿ ಕಾಂಗ್ರೆಸ್‌ ಚುನಾವಣೆ ಗೆಲ್ಲುತ್ತಿತ್ತು. ಈಗ ಆ ಕಾಲ ಇಲ್ಲ. ದ.ಕ. ಜಿಲ್ಲೆಯ ಜನ ದೇಶದ ಹಿತಕ್ಕಾಗಿ ಮತ ಹಾಕುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಇದ್ದಾರೆ. ಜನತೆ ಜಾತಿ ನೋಡದೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ವಿಚಾರಗಳು, ಅಭಿವೃದ್ಧಿಯ ವಿಚಾರಗಳು ಬಂದಾಗ ಜಾತಿ ಮುಖ್ಯವಾಗುವುದಿಲ್ಲ. ಬಿಜೆಪಿ ಎಲ್ಲರ ಪಕ್ಷ. ರಾಷ್ಟ್ರೀಯವಾದಿ ಧೋರಣೆ ಹೊಂದಿರುವ ಎಲ್ಲರೂ ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ ಎಂದು ಕೋಟ್ಯಾನ್‌ ಹೇಳಿದರು.

ನಳಿನ್‌ ಅವಧಿಯಲ್ಲಿ ಅಭಿವೃದ್ಧಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾಡಿದ ಕೆಲಸಗಳು ಶ್ಲಾಘನೀಯ. ಕಾರ್ಕಳದಿಂದ ಬಿಕರ್ನಕಟ್ಟೆಯ ವರೆಗಿನ ರಸ್ತೆ ಇಂದು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೆಲವು ಪ್ರಗತಿಯಲ್ಲಿವೆ. ಈ ಕಾರ್ಯ ಗಳು ಇನ್ನಷ್ಟು ವೇಗ ಪಡೆದು ಮುಂದುವರಿಯ ಬೇಕಾದರೆ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟರು ದಾಖಲೆಯ ಬಹುಮತದೊಂದಿಗೆ ಗೆದ್ದು ಬರಬೇಕಾಗಿದೆ ಎಂದು ಶಾಸಕರು ಪ್ರತಿಪಾದಿಸಿದರು.

ಮಾತು ಉಳಿಸಿದ ಮೋದಿ
ಅಂದು ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆರ್ಟಿಕಲ್‌ 370 ರದ್ದು ಮಾಡಿರುವುದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ-ಇವೆಲ್ಲ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಕಾರ್ಯಗಳನ್ನು ಇಂದು ಪ್ರಧಾನಿ ಮೋದಿ ಮಾಡಿ ಮುಗಿಸಿದ್ದಾರೆ ಎಂದು ಕೋಟ್ಯಾನ್‌ ಹೇಳಿದರು.

Advertisement

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್‌ ಆರ್ವಾರ, ಚುನಾವಣಾ ಸಂಚಾಲಕ ನಿತಿನ್‌ ಕುಮಾರ್‌, ಮಂಡಲ ಅಧ್ಯಕ್ಷ ದಿನೇಶ್‌ ಪುತ್ರನ್‌, ಯುವ ಮೋರ್ಚಾ ಅಧ್ಯಕ್ಷ ನಂದನ್‌ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ
ಡಾ| ಮಂಜುಳಾ ರಾವ್‌ ಹಾಗೂ ಬಂಟ್ವಾಳ ಚುನಾವಣ ಉಸ್ತುವಾರಿ ಜಗದೀಶ್‌ ಶೇಣವ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

ಉಗ್ರರನ್ನು ಬೆಳೆಸಿದ ಪಕ್ಷ ಕಾಂಗ್ರೆಸ್‌
ಭಾರತದಲ್ಲಿದ್ದುಕೊಂಡು ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹೇಳುವವರು, ಇಲ್ಲಿಯೇ ಹುಟ್ಟಿ ಬೆಳೆದು, ಇಲ್ಲಿನ ಅನ್ನ ತಿಂದುಕೊಂಡು ಇಲ್ಲಿಯೇ ಬಾಂಬ್‌ ಹಾಕುವ ಉಗ್ರರನ್ನು ಬೆಳೆಸಿದ್ದು ಕಾಂಗ್ರೆಸ್‌ ಪಕ್ಷ. ಇಂತಹ ಪರಿಸ್ಥಿತಿಯನ್ನು ಮಟ್ಟಹಾಕಿ ದೇಶದ ಭದ್ರತೆಯನ್ನು ಗಟ್ಟಿಗೊಳಿಸಿದವರು ಪ್ರಧಾನಿ ನರೇಂದ್ರ ಮೋದಿ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಈ ದೇಶದ ವೈಭವವನ್ನು ಉತ್ತುಂಗಕ್ಕೆ ಏರಿಸಬೇಕೆಂದು ದೇಶದ ಜನ ಬಯಸಿದ್ದಾರೆ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next