ಚಿಕ್ಕಮಗಳೂರು: ಹುಬ್ಬಳ್ಳಿ ಗಲಾಟೆ ಅಕಸ್ಮಾತಾಗಿ ನಡೆದಿರುವ ಸಂಗತಿಗಳಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟವಾಗಿದೆ. ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಆಗುವುದಿಲ್ಲ. ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯ ಬೆಲೆ ತೆರಬೇಕಾಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು. ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ ಎಂದರು.
ಗಲಭೆ ಹುಟ್ಟು ಹಾಕುವುದೇ ಅವರ ದುರುದ್ದೇಶವಾದರೆ ಗಲಭೆ ನಿಯಂತ್ರಿಸುವ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಕರ್ನಾಟಕ ರಾಜ್ಯವನ್ನು ಮತ್ತೊಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾಡಲು ಬಿಡಬಾರದು ಎಂದರು.
ಇದನ್ನೂ ಓದಿ:ಮಂಗಳೂರು: BMW ಕಾರು ಢಿಕ್ಕಿ; ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನಕ್ಕೆ ನಿರ್ಧಾರ
ಪಿಎಸೈ ಅಕ್ರಮ ವಾಸನೆ ಕಂಡುಬಂದ ತಕ್ಷಣ ಸಿ.ಎಂ ಹಾಗೂ ಗೃಹಸಚಿವರಿಗೆ ಆಗ್ರಹಿಸಿದ್ದೇನೆ. ಯಾರೇ ಪಾಲುದಾರರಿದ್ದರೂ ಕಳ್ಳರು ಕಳ್ಳರೇ. ಯಾರೇ ಇದ್ದರೂ ಅಕ್ರಮ ನಡೆಸಿದವರು ಅಕ್ರಮ ನಡೆಸಿದವರೇ. ಅಕ್ರಮ ನಡೆಸುವವರು ಕಾಂಗ್ರೆಸ್ ಮುಖವಾಡನೂ ಹಾಕ್ತಾರೆ, ಬಿಜೆಪಿ ಮುಖವಾಡನೂ ಹಾಕುತ್ತಾರೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ, ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ. ಯಾರೇ ಇದ್ದರೂ, ಎಷ್ಟೇ ಪ್ರಭಾವಿಗಳಿದ್ದರೂ ಕಠಿಣ ಕ್ರಮವಾಗುತ್ತದೆ ಎಂದು ಸಿ.ಟಿ. ರವಿ ಹೇಳಿದರು.