ಚಿಕ್ಕಮಗಳೂರು: ಕರ್ನಾಟಕ- ಮಹಾರಾಷ್ಟ್ರದ ನಡುವೆ ಸಂಘರ್ಷ ಮಾಡುವ ಸಂಚು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಸಂಘರ್ಷ ಮಾಡುವ ಉದ್ದೇಶದಿಂದ, ಅರಾಜಕತೆವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆಯಿದೆ. ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಅಲ್ಲಿಯ ಸರ್ಕಾರ ಕಾಂಗ್ರೆಸ್ ಸರ್ಕಾರದ ಪಾಲುದಾರರದ್ದು. ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿದರು ಎಂದರು.
ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಬಂದ ವಾಹನಗಳ ಮೇಲೆ ಕಲ್ಲು ತೂರಾಟ: 27 ಮಂದಿ ಬಂಧನ
ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ, ಕರ್ನಾಟಕದಲ್ಲಿ ಲಕ್ಷಾಂತರ ಸಂಖ್ಯೆ ಮರಾಠಿಗರಿದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆ ಜೊತೆ ಹಾಸುಹೊಕ್ಕಾಗಿದೆ. ರಾಷ್ಟ್ರೀಯ ಹಿತಸಕ್ತಿಗೆ ಧಕ್ಕೆ ತರಲು ಕೆಲವರು ಷಡ್ಯಂತರ ನಡೆಸುತ್ತಾರೆ. ಆ ಷಡ್ಯಂತರಕ್ಕೆ ಅವಕಾಶ ನೀಡಬಾರದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.