ಶಿವಮೊಗ್ಗ: ಕೆಲವು ಜನರಿಗೆ ದೊಡ್ಡ ಸಮಾಜದ ನಾಯಕರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ಎಂ.ಬಿ.ಪಾಟೀಲ್ ಆ ಕನಸನ್ನು ಕಾಣುತ್ತಿದ್ದಾರೆ. ಹಿಂದೊಮ್ಮೆ ಹೀಗೆ ಮಾಡಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ನನಗೆ ಆತ್ಮೀಯರಿದ್ದಾರೆ. ಜೊತೆಗೆ ಯುವಕರು ಕೂಡ. ಧರ್ಮ ಹಾಗೂ ಜಾತಿಯ ವಿಚಾರ ಬಹಳ ಸೂಕ್ಷ್ಮವಾದದ್ದು. ಆ ವಿಚಾರ ಬಂದಾಗ ಬಹಳ ಎಚ್ಚರಿಕೆಯಿಂದ ಮುಟ್ಟಬೇಕಾಗುತ್ತದೆ. ಜನ ಹಾಗೂ ಸಮಾಜ ನಮಗೆ ಗುರುತರವಾದ ಜವಾಬ್ದಾರಿಯನ್ನು ಕೊಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಗೂ ಆಯಾ ಧರ್ಮ, ಜಾತಿಯ ಬಗ್ಗೆ ಅಭಿಮಾನ, ಗೌರವ ಇದ್ದೇ ಇರುತ್ತದೆ. ಅದು ತಪ್ಪಲ್ಲ. ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆಯೊಂದಿಗೆ ನಾವು ರಾಜಕಾರಣ ಮಾಡಬೇಕಾಗುತ್ತದೆ ಎಂದರು.
ಇದನ್ನೂ ಓದಿ:ಸಾರ್ವಜನಿಕ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ; ಷರತ್ತುಗಳು ಅನ್ವಯ
ಪಂಚಮಸಾಲಿ ಸಮುದಾಯದಿಂದ ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಾಜದ ವ್ಯಕ್ತಿ ಹಾಗೂ ಸರ್ಕಾರದ ಭಾಗವಾಗಿ ಎರಡನ್ನು ಸರಿದೂಗಿಸಿ ಕೆಲಸ ಮಾಡುತ್ತಿದ್ದೇನೆ. ಹೋರಾಟದ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಭೇಟಿ ಮಾಡಿದ್ದಾರೆ. ಇಬ್ಬರೂ ಯಾವ ರೀತಿ ಪೂರಕ ವಾತವರಣ ನಿರ್ಮಾಣ ಮಾಡ್ಬೇಕು ಎಂಬುದನ್ನು ಚರ್ಚಿಸಿದ್ದಾರೆ ಎಂದರು.
ಅದರ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿ ನಾನು ಮತ್ತಷ್ಟು ಜಟಿಲ ಮಾಡುವುದಿಲ್ಲ. ಹೋರಾಟ ಯಶಸ್ವಿಯಾಗಬೇಕು ಎಂಬ ಭಾವನೆ ನನ್ನಲ್ಲಿ ಕೂಡ ಇದೆ. ಅದಕ್ಕೆ ಪೂರಕವಾಗಿ ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಸಿ.ಸಿ.ಪಾಟೀಲ್ ಹೇಳಿದರು.