ಮನಸಿನ ಕಿಟಕಿಯನ್ನು ತಟ್ಟಿ ದೂರ ಓಡಿಹೋದ ಗೆಳೆಯನೇ. ನಿನಗಾಗಿ ಈ ಮನ ಕಾಯುತ್ತಿದೆ. ನಿನಗಾಗಿ ಕಾದಿರುವ ಈ ನಿನ್ನ ಗೆಳತಿಯ ಮನದ ಮಾತುಗಳನ್ನು ಒಮ್ಮೆ ಕೇಳಲಾರೆಯಾ? ನೀನಿರದ ಈ ಜೀವನ ನನಗೆ ಬೇಡವಾಗಿದೆ. ಬದುಕಿನ ಪ್ರತಿ ಘಳಿಗೆಯೂ ನೀನೇ ಬೇಕು ಎನಿಸುತ್ತಿದೆ.
Advertisement
ನಿನ್ನ ಬಿಟ್ಟು ಈಗ ನಾನೀಗ ಒಬ್ಬಳೇ ಇರಲಾರೆ. ಈ ಮನದ ಪುಟದಲ್ಲಿ ನಿನ್ನದೇ ಮುನ್ನುಡಿ ಬರೆಯುವ ಆಸೆ. ನಿದ್ರೆಯನ್ನು ಕದ್ದಿರುವ ಚೋರನೇ, ಎಷ್ಟು ದಿನ ಅಂತ ಹೀಗೆ ಕನಸಿನಲ್ಲೇ ಕಾಡುವೆ? ಈ ಅಸಹಾಯಕ ಹೃದಯದ ಪರಿತಾಪವನ್ನು ನೋಡಲಿಕ್ಕಾದರೂ ಒಮ್ಮೆ ಬಾ.
ಹೋಗಿದೆ ನೆಮ್ಮದಿ ನನ್ನನು ತೊರೆದು, ನೀನಿರದೆ
ಎಂಬ ಹಾಡೊಂದಿದೆ. ನನ್ನ ಈ ಕ್ಷಣದ ಪರಿಸ್ಥಿತಿಯನ್ನು ಕಂಡೇ ಆ ಹಾಡು ಬರೆದರೇನೋ ಅನಿಸುತ್ತದೆ ನನಗೆ. ನನ್ನ ಬದುಕು ಹೀಗೆಲ್ಲಾ ತಿರುವು ಪಡೆದುಕೊಳ್ಳುತ್ತೆ ಎಂಬ ಸಣ್ಣದೊಂದು ಅಂದಾಜೂ ನನಗಿರಲಿಲ್ಲ. ಮುಂದೆ ಹೀಗೆಲ್ಲಾ ಆಗಿಬಿಡುತ್ತೆ ಎಂದು ಗೊತ್ತಿದ್ದಿದ್ರೆ ದೇವರಾಣೆಗೂ ನಿನ್ನನ್ನು ನೋಡುತ್ತಿರಲಿಲ್ಲ. ನೀನೇ ದುಂಬಾಲು ಬಿದ್ದಿದ್ರೂ (ಈಗಲೂ ಹಾಗೇ ತಾನೇ ಆಗಿದ್ದು…) ನಾನು ಮರುಳಾಗ್ತಾ ಇರಲಿಲ್ಲ. ಆದರೆ, ಏನೇನೋ ಆಗಿ ಹೋಯ್ತು. ಈಗ ಈ ಮನಸಿಗೆ ಎಷ್ಟೇ ಬುದ್ಧಿ ಹೇಳಿದರೂ ಸಾಲುತ್ತಿಲ್ಲ. ಅದು ಪ್ರತೀ ದಿನ, ಪ್ರತೀ ಕ್ಷಣ ನಿನ್ನನ್ನೇ ಜಪಿಸುತ್ತಿದೆ. ನಿನ್ನದೇ ಗುನುಗಿನಲ್ಲಿ ಕಳೆದು ಹೋಗುವ ನನ್ನ ಕಣ್ಣು ಎಲ್ಲೆಲ್ಲೂ ನಿನ್ನನ್ನೇ ಹುಡುಕುತ್ತಿದೆ. ನಿನ್ನ ಒಂದು ನೋಟಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ನೀನಿಲ್ಲದೆ ಈ ಮನಸಿನ ಗಡಿಯಾರ ನಿಂತು ಹೋದ ಹಾಗಿದೆ. ಇದಕ್ಕೊಮ್ಮೆ ಕೀಲಿ ನೀಡಲಿಕ್ಕಾದರೂ ಬರುವೆಯಾ? ನೀನಿರದೆ ಈ ಮನದ ಹೂದೋಟ ಬಾಡಿದೆ. ನಿಂತ ನೀರಿನಂತಾಗಿರುವ ಈ ಜೀವನಕ್ಕೆ ಹೊಸ ನೀರಿನಂತೆ ಬಂದು ನದಿ ಸಮುದ್ರ ಸೇರುವಂತೆ ಮಾಡುವೆಯಾ? ನಿನ್ನ ನೆನಪಲ್ಲೇ ಕಳೆದು ಹೋಗುವ ನನಗೆ ಸರಿಯಾದ ದಾರಿ ತೋರಿಸಲು ಬರುವೆಯಾ? ಹೀಗೆ ಎಷ್ಟು ದಿನ ಅಂತ ನಿನ್ನ ನೆನಪಲ್ಲೇ ಕಳೆಯಲಿ ಎಂದು ನನಗೆ ತಿಳಿಯುತ್ತಿಲ್ಲ. ಮುಸ್ಸಂಜೆಯಲ್ಲಿ ಬೀಸುವ ತಂಗಾಳಿ ನನ್ನ ಸ್ಪರ್ಶಿಸಿದಾಗ ನಿನ್ನ ಇರುವಿಕೆ ಅಲ್ಲಿ ಭಾಸವಾಗುತ್ತದೆ. ತಿಳಿ ನೀಲಿ ಆಗಸದಲ್ಲಿ ಹುಣ್ಣಿಮೆಯ ಚಂದಿರ ಮೂಡಿ ಬಂದಾಗ ನಿನ್ನ ಕಂಡಂತೆ ಈ ಮನ ನಲಿಯುತ್ತದೆ. ಆಕಾಶ ಖುಷಿಯಿಂದ ಅಂಬರ ಧಾರೆ ಸುರಿಸುವಾಗ ನಿನ್ನೊಂದಿಗೆ ಒಂದೇ ಕೊಡೆಯಲ್ಲಿ ಸುತ್ತುವ ಬಯಕೆ ನನ್ನದು. ಈ ಚಳಿಯಲ್ಲಿ ನಿನ್ನ ಜೊತೆ ಬಿಸಿ ಬಿಸಿ ಬೈಟು ಕಾಫಿ ಕುಡಿಯುವ ಆಸೆ ನನ್ನದು. ಒಮ್ಮೆ ಸಿಗುವೆಯಾ?
Related Articles
Advertisement