Advertisement

ಬೈರತಿಗೆ ಅನರ್ಹತೆ ತಲೆ ಬಿಸಿ

09:57 AM Nov 29, 2019 | Lakshmi GovindaRaj |

ಬೆಂಗಳೂರು: ನಗರ ಗಡಿ ಭಾಗದ ಕ್ಷೇತ್ರ ಕೆ.ಆರ್‌.ಪುರಂ ನಲ್ಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅನರ್ಹತೆ ಹಣೆಪಟ್ಟಿ ಕಟ್ಟಿಕೊಂಡು ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಬಿ.ಎ.(ಬೈರತಿ) ಬಸವರಾಜ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ವಿಧಾನಪರಿಷತ್‌ ಸದಸ್ಯ ಎಂ. ನಾರಾಯಣಸ್ವಾಮಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಒಕ್ಕಲಿಗ ಮತದಾರರ ನಡೆ ಹಾಗೂ ಮೂಲ ಬಿಜೆಪಿ ಕಾರ್ಯಕರ್ತರ ನಡೆ ಅತ್ಯಂತ ಮಹತ್ವದ್ದಾಗಿದೆ.

Advertisement

ಆರಂಭದಲ್ಲಿ ಬೈರತಿ ವಿರುದ್ಧ ನಂದೀಶ್‌ ರೆಡ್ಡಿ ಮುನಿಸಿಕೊಂಡಿದ್ದರೂ, ನಂತರ ಬಿಎಸ್‌ವೈ ಅವರ ಸಂಧಾನದ ಫ‌ಲವಾಗಿ ಬಿಎಂಟಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡು, ಬಸವರಾಜ್‌ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರವ್ಯಾಪ್ತಿಯ ಕಾಂಗ್ರೆಸ್‌ನ ನಾಲ್ವರು ಕಾರ್ಪೊರೇಟರ್‌ಗಳು ಬೈರತಿ ಬಸವರಾಜ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಮೂವರು ಕಾರ್ಪೊರೇಟರ್‌ಗಳಿದ್ದು, ಬೈರತಿ ಬಲ ಹೆಚ್ಚಾದಂತೆ ಕಾಣುತ್ತಿದೆ. ಆದರೆ, ಅನರ್ಹ ಎಂಬ ಹಣೆಪಟ್ಟಿ ಗುಪ್ತಗಾಮಿನಿಯಾಗಿ ಮತದಾರರ ಮನದಲ್ಲಿ ಹರಿಯುತ್ತಿದ್ದು, ಅದು ಅವರ ವಿರುದ್ಧದ ಮತವಾಗಿ ಚಲಾವಣೆಯಾದರೆ, ದೊಡ್ಡ ಶಾಕ್‌ ಎದುರಾಗಲಿದೆ.

ಮೂಲ ಬಿಜೆಪಿಗರ ನಡೆ ಕುತೂಹಲ: ಕ್ಷೇತ್ರದಲ್ಲಿ 70 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಸೇರಿ ದವರಾಗಿದ್ದು, ಬೈರತಿ ಬಸವರಾಜ್‌, ಒಕ್ಕಲಿಗ ಸಮು ದಾಯದ ಮುಖ್ಯಮಂತ್ರಿಯನ್ನು ಕೆಳಗಿಳಿಸಿದ್ದಾರೆ ಎಂಬ ಆಕ್ರೋಶ ಆ ಸಮುದಾಯದಲ್ಲಿದೆ. ಅಲ್ಲದೇ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಯವರೇ ಜೈಲಿಗೆ ಕಳುಹಿಸಿದ್ದರು ಎಂಬ ಅಭಿಪ್ರಾಯವೂ ಆ ಸಮುದಾಯದ ಜನರಲ್ಲಿ ಮೂಡಿದ್ದು, ಅದು ಬಿಜೆಪಿ ಅಭ್ಯರ್ಥಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

ಅದಕ್ಕಿಂತಲೂ ಬೈರತಿ ಬಸವರಾಜ್‌ ಸೋಲು-ಗೆಲುವು ನಿರ್ಧರಿಸುವುದು ಮೂಲ ಬಿಜೆಪಿ ಕಾರ್ಯಕರ್ತರ ನಡೆ. ಬೈರತಿ ಬಸವರಾಜ್‌ ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಟಾಳಿಕೆ ನಡೆಸಿ, ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬ ಆಕ್ರೋಶ ಮೂಲ ಬಿಜೆಪಿ ಕಾರ್ಯಕರ್ತರಲ್ಲಿದೆ. ಅಲ್ಲದೇ ಚುನಾ ವಣೆ ಪ್ರಚಾರದಲ್ಲಿ ಬೈರತಿ ಬಸವರಾಜ್‌ ಎಲ್ಲ ಜವಾಬ್ದಾರಿ ಗಳನ್ನು ತಮ್ಮ ಆಪ್ತರಿಗೆ ನೀಡಿರುವುದೂ ಕೂಡ ಮೂಲ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಬೈರತಿ ಹಿಂಬಾಲಕರದೇ ಒಂದು ತಂಡವಾಗಿ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ಮೂಲ ಕಾರ್ಯಕರ್ತರು ಪಕ್ಷದ ಸೂಚನೆ ಮೇರೆಗೆ ಪ್ರತ್ಯೇಕವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಬೈರತಿ ಬಸವರಾಜ್‌ ಅವರ ಸೋಲು-ಗೆಲುವು ಇದರಿಂದ ನಿರ್ಧರಿತವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಪ್ರಚಾರದಲ್ಲಿ ಮಂಕು: ಕ್ಷೇತ್ರದಲ್ಲಿ ಬೈರತಿ ಬಸವರಾಜ್‌ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ ಹೊರತುಪಡಿಸಿ ಬೇರೆ ಪಕ್ಷಗಳ ಅಭ್ಯರ್ಥಿಗಳಿಲ್ಲ. ಜೆಡಿಎಸ್‌ ಅಭ್ಯರ್ಥಿ ಕೃಷ್ಣ ಮೂರ್ತಿ ಕಣದಲ್ಲಿದ್ದರೂ, ಪೈಪೋಟಿ ನೀಡುವ ಮಟ್ಟದಲ್ಲಿ ಇಲ್ಲದಿರುವುದರಿಂದ ನಾರಾಯಣ ಸ್ವಾಮಿಯೇ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದರೆ, ಬೈರತಿ ಯವರ ಅಬ್ಬರದ ಪ್ರಚಾರದ ಮುಂದೆ ನಾರಾಯಣ ಸ್ವಾಮಿ ಪ್ರಚಾರ ಮಂಕಾಗಿದ್ದು, ಕ್ಷೇತ್ರದಲ್ಲಿ ಸ್ಥಳೀಯ ವಾಗಿಯೂ ನಾಯಕರ ಕೊರತೆ ಎದ್ದು ಕಾಣಿಸುತ್ತಿದೆ. ಆದರೆ, ಎ.ಕೃಷ್ಣಪ್ಪ ಸಹೋದರ ಬಿ.ಎ.ಗೋಪಾಲ್‌ ಹಾಗೂ ಡಿ.ಕೆ. ಮೋಹನ್‌ ಬಾಬು ಬೆಂಬಲವಾಗಿದ್ದಾರೆ.

Advertisement

ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಕೆ.ಜೆ.ಜಾರ್ಜ್‌ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ಕಾಂಗ್ರೆಸ್‌ ನೇಮಿಸಿದ್ದು, ಬೈರತಿ ಬಸವರಾಜ್‌ ಜಾರ್ಜ್‌ ವಿರುದ್ಧ ಆರೋಪ ಮಾಡಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಜಾರ್ಜ್‌ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಭ್ಯರ್ಥಿಗಿಂತ ಹೆಚ್ಚು ಸಕ್ರೀಯವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಜತೆಗೆ ರಾಮಲಿಂಗಾ ರೆಡ್ಡಿಯವರು ಬೈರತಿಯವರನ್ನು ಸೋಲಿಸಲು ಹಠ ತೊಟ್ಟಿರುವುದು ಕಾಂಗ್ರೆಸ್‌ ಅಭ್ಯರ್ಥಿಗೆ ಪ್ಲಸ್‌ ಆಗಿದೆ.

ನಾಯಕರ ಪ್ರಭಾವ: ಈ ಕ್ಷೇತ್ರದಲ್ಲಿ ಒಕ್ಕಲಿಗ ಮತ ದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಡಿ.ಕೆ.ಶಿವಕುಮಾರ್‌ ಅವರ ವಿಷಯದಲ್ಲಿ ನಡೆದ ಬೆಳವಣಿಗೆ ಪ್ರಭಾವ ಬೀರುವಂತೆ ಆಗಿದೆ. ಅಲ್ಲದೇ ದಲಿತ, ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರುವುದರಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಭಾವ ಇದೆ. ಬಿಜೆಪಿಯಲ್ಲಿ ಸ್ಥಳೀಯ ನಾಯಕ ನಂದೀಶ್‌ ರೆಡ್ಡಿ ಹಾಗೂ ಕಂದಾಯ ಸಚಿವ ಆರ್‌.ಅಶೋಕ್‌ ಪ್ರಭಾವ ಕ್ಷೇತ್ರದಲ್ಲಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆ ಯಲ್ಲಿದ್ದು, ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ದಲಿತರು ಹಾಗೂ ಅಲ್ಪಸಂಖ್ಯಾತ ಸಮು ದಾಯದ ಮತದಾರರು ಅಷ್ಟೇ ದೊಡ್ಡ ಪ್ರಮಾಣದಲ್ಲಿ ರುವುದರಿಂದ ಅವರ ನಡೆಯೂ ಅಭ್ಯರ್ಥಿಗಳ ಭವಿಷ್ಯವನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಿದೆ.

ಕ್ಷೇತ್ರದ ಇತಿಹಾಸ: ಕೆ.ಆರ್‌.ಪುರಂ ಮೂಲ ಕಾಂಗ್ರೆಸ್‌ನ ಭದ್ರಕೋಟೆ ಯಾಗಿತ್ತು. 2008ರಲ್ಲಿ ವರ್ತೂರು ಕ್ಷೇತ್ರದಿಂದ ಇಬ್ಭಾಗವಾಗಿ ಕೆ.ಆರ್‌.ಪುರಂ ಹೊಸ ಕ್ಷೇತ್ರವಾಗಿ ರೂಪ ಗೊಂಡ ನಂತರ ಬಿಜೆಪಿ ಮೊದಲ ಬಾರಿಗೆ ತನ್ನ ಖಾತೆ ತೆರೆದಿತ್ತು. ನಂದೀಶ್‌ ರೆಡ್ಡಿ ಕಾಂಗ್ರೆಸ್‌ನ ಹಿರಿಯ ನಾಯಕ ರಾಗಿದ್ದ ಎ.ಕೃಷ್ಣಪ್ಪ ವಿರುದ್ಧ ಜಯ ಗಳಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವ ಕಾಣುವಂತೆ ಮಾಡಿದ್ದರು. ಆದರೆ, 2013ರಲ್ಲಿ ಕಾಂಗ್ರೆಸ್‌ನಲ್ಲಿ ಎ.ಕೃಷ್ಣಪ್ಪ ಅವರಿಗೆ ಟಿಕೆಟ್‌ ತಪ್ಪಿಸಿ ಸಿದ್ದರಾಮಯ್ಯ ತಮ್ಮದೇ ಸಮುದಾಯಕ್ಕೆ ಸೇರಿದ್ದ ಬೈರತಿ ಬಸವರಾಜ್‌ ಅವರಿಗೆ ಟಿಕೆಟ್‌ ನೀಡಿ ದ್ದರು. ಚುನಾವಣೆಯಲ್ಲಿ ಗೆದ್ದು ಬೈರತಿ ಭರವಸೆ ಉಳಿಸಿ ಕೊಂಡಿದ್ದರು. 2018 ರಲ್ಲಿಯೂ ಜಯಸಾಧಿಸಿದ್ದರು.

ಪ್ರಮುಖ ವಿಷಯ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಭಿವೃದ್ಧಿಗಾಗಿ ಕಾಂಗ್ರೆಸ್‌ ತೊರೆದಿರುವುದಾಗಿ ಹೇಳುತ್ತಿದ್ದು, ಕಾಂಗ್ರೆಸ್‌ ಕೂಡ ಬೈರತಿ ಬಸವರಾಜ್‌ ಪಕ್ಷಾಂತರ ಮಾಡಿ ಅನರ್ಹರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಲ್ಲ ರೀತಿಯ ಸವಲತ್ತು ಪಡೆದು ಸರ್ಕಾರ ಹಾಗೂ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎನ್ನುವ ವಿಷಯವೇ ಹೆಚ್ಚು ಚರ್ಚೆಯಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಸಂವಿಧಾನದ 370ನೆ ವಿಧಿ ರದ್ದತಿ, ತ್ರಿವಳಿ ತಲಾಖ್‌ ರದ್ದತಿ ಹಾಗೂ ರಾಮಮಂದಿರ ವಿಷಯ ಗೌಣವಾಗಿವೆ.

ಜಾತಿ ಲೆಕ್ಕಾಚಾರ
ಒಕ್ಕಲಿಗ -75000
ಎಸ್ಸಿ, ಎಸ್ಟಿ-63000
ಅನ್ಯ ಭಾಷಿಕರು-50000
ಯಾದವರು-25000
ಮುಸ್ಲಿಂ 38000
ಕ್ರಿಶ್ಚಿಯನ್‌-35000
ಬ್ರಾಹ್ಮಣರು -12000
ಲಿಂಗಾಯತ-2000

ಒಟ್ಟು ಮತದಾರರು-4.87 ಲಕ್ಷ
ಪುರುಷರು-2.55 ಲಕ್ಷ
ಮಹಿಳೆಯರು-2.32 ಲಕ್ಷ
ಇತರ-164
ಹೊಸ ಮತದಾರರು-6,580

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next