Advertisement

ಕೆ.ಆರ್‌.ಪುರದಲ್ಲಿ ಬೀಗಿದ ಬೈರತಿ

10:12 PM Dec 09, 2019 | Lakshmi GovindaRaj |

ಕೆ.ಆರ್‌.ಪುರ: ಕಾಂಗ್ರೆಸ್‌ನಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಯಾಗಿದ್ದ ಬೈರತಿ ಬಸವರಾಜು ಕೆ.ಆರ್‌.ಪುರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅನರ್ಹತೆ ವಿಚಾರವನ್ನೇ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದರೂ ಖುದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಹಲವಾರು ಬಾರಿ ಕ್ಷೇತ್ರದಲ್ಲಿ ಪ್ರಚಾರ ಮಾಡಿ ತಮ್ಮ ಮಾಜಿ ಶಿಷ್ಯನ ಸೋಲಿಸಿ ಎಂದು ಕರೆ ನೀಡಿದರೂ ಬೈರತಿ ಬಸವರಾಜು ಗೆಲುವು ತಡೆಯಲಾಗಲಿಲ್ಲ.

Advertisement

ಕಾಂಗ್ರೆಸ್‌ನಿಂದ ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿದರೂ ಬೈರತಿ ಬಸವರಾಜು ಅವರ ಮುಂದೆ ಪ್ರಬಲ ಅಭ್ಯರ್ಥಿಯಾಗಲಿಲ್ಲ. ನಾರಾಯಣಸ್ವಾಮಿ ಅಭ್ಯ ರ್ಥಿಯಾಗಿದ್ದಕ್ಕೆ ಸ್ಥಳೀಯ ಮುಖಂಡರಲ್ಲೂ ವಿರೋ ಧವಿತ್ತು. ಅವರ ಪರ ನಾಯಕರು ನಿಲ್ಲಲಿಲ್ಲ. ಬೈರತಿ ಬಸವರಾಜು ಅಬ್ಬರದಲ್ಲಿ ನಾರಾಯಣಸ್ವಾಮಿ ಕಳೆದುಹೋದರು. ಬೈರತಿ ಬಸವರಾಜು ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಅನರ್ಹತೆ ಶಿಕ್ಷೆಗೆ ಒಳಗಾಗಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಅನರ್ಹತೆ ಎತ್ತಿ ಹಿಡಿದು ಉಪ ಚುನಾವಣೆ ಸ್ಪರ್ಧೆಗೆ ಆನುಮತಿ ಸಿಕ್ಕ ನಂತರ ಬೈರತಿ ಬಸವರಾಜು ನಿರಾಳವಾಗಿದ್ದರು.

ಶಾಸಕ ಸ್ಥಾನಕ್ಕೆ ಕೊಟ್ಟಿದ್ದ ರಾಜೀನಾಮೆ ಕ್ರಮಬದ್ಧ ಅಲ್ಲ ಎಂಬ ಕಾರಣಕ್ಕೆ ಮತ್ತೂಮ್ಮೆ ರಾಜೀನಾಮೆ ಸಲ್ಲಿಸಬೇಕಾಗಿ ಬಂದಾಗ ವಿಧಾನಸೌಧಕ್ಕೆ ಓಡೋಡಿ ಬಂದು ರಾಜೀನಾಮೆ ನೀಡಿದ ಬೈರತಿ ಬಸವರಾಜು ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯರಾ ಗಿದ್ದುಕೊಂಡೇ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿಗೆ ಸೇರಿದ್ದ ಬಸವರಾಜು ಗೆಲುವಿಗಾಗಿ ಕ್ಷೇತ್ರದಲ್ಲಿ ಬೆವರು ಹರಿಸಿದ್ದರು. ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಸದಸ್ಯ ರಾಗಿದ್ದ ಇವರ ಬೆಂಬಲಿಗರು ಬಿಜೆಪಿಗೆ ಜೈ ಎಂದಿದ್ದು ಬೈರತಿ ಬಸವರಾಜುಗೆ ಅನುಕೂಲಕರವಾಯಿತು.

ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಂದೀಶ್‌ ರೆಡ್ಡಿ ಅವರನ್ನು ಮನವೊಲಿಸಿ ಬಿಎಂಟಿಸಿ ಅಧ್ಯಕ್ಷ ರನ್ನಾಗಿ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ದ್ದರು. ರೆಡ್ಡಿ ಸಮುದಾಯಕ್ಕೆ ಅವಕಾಶ ತಪ್ಪಿಸಿದರು ಎಂಬ ಹಣೆಪಟ್ಟಿ ಬಾರದಂತೆ ನೋಡಿಕೊಂಡು ನಂದೀಶ್‌ರೆಡ್ಡಿ ಅವರ ಬೆಂಬಲವೂ ಪಡೆದು ಸಚಿವ ಆರ್‌.ಅಶೋಕ್‌ , ಮಾಜಿ ಸಚಿವ ಅರವಿಂದ ಲಿಂಬಾವಳಿ ಬೈರತಿ ಬಸವರಾಜು ಗೆಲುವಿನ ಹೊಣೆಗಾರಿಕೆ ಹೊತ್ತಿದ್ದರು. ಜೆಡಿಎಸ್‌ನಿಂದ ಕೃಷ್ಣಮೂರ್ತಿ ಎಂಬವರು ಕಣಕ್ಕಿಳಿದರೂ ಪಕ್ಷದ ನೆಲೆ ಅಷ್ಟಾಗಿ ಇಲ್ಲದ ಕಾರಣ ಬೈರತಿ ಬಸವರಾಜು ಗೆಲುವು ತಡೆಯುವುದಿರಲಿ, ಠೇವಣಿ ಉಳಿಸಿಕೊಳ್ಳಲೂ ಆಗಲಿಲ್ಲ.

ಗೆದ್ದವರು
ಬೈರತಿ ಬಸವರಾಜು (ಬಿಜೆಪಿ)
ಪಡೆದ ಮತ: 139879
ಗೆಲುವಿನ ಅಂತರ: 63443

Advertisement

ಸೋತವರು
ಕೃಷ್ಣಮೂರ್ತಿ (ಜೆಡಿಎಸ್‌)
ಪಡೆದ ಮತ: 2048

ನಾರಾಯಣಸ್ವಾಮಿ (ಕಾಂಗ್ರೆಸ್‌)
ಪಡೆದ ಮತ: 76436

ಗೆದ್ದದ್ದು ಹೇಗೆ?
-ಕ್ಷೇತ್ರದಲ್ಲಿ ಬೈರತಿ ಬಸವರಾಜು ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವುದು

-ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಹಾಕದೇ ಇರುವುದು

-ಕಾಂಗ್ರೆಸ್‌ ಪಾಲಿಕೆ ಸದಸ್ಯರ ಬೆಂಬಲ ಬೈರತಿ ಬಸವರಾಜುಗೆ ಸಿಕ್ಕಿರುವುದೇ ಆಗಿದೆ.

ಸೋತದ್ದು ಹೇಗೆ?
-ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಅಸಹಕಾರ, ಪಕ್ಷದ ಕಾರ್ಯಚಟುವಟಿಕೆ ಕಾರ್ಯಕರ್ತರ ನಡೆಸಲು ನಿರಾಸಕ್ತಿ

-ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಒಗ್ಗಟ್ಟು ಪ್ರದರ್ಶಿಸಿ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿ ಅಭಿವೃದ್ಧಿ ಕಾರ್ಯ ತಿಳಿಸಿದ್ದು

-ಬಿಜೆಪಿ ಹೊರತುಪಡಿಸಿದರೆ ಇತರೆ ಪಕ್ಷಗಳಿಗೆ ಚುನಾವಣೆ ಎದುರಾಗಿದ್ದ ಸಂಪನ್ಮೂಲದ ಕೊರತೆ

ಅನರ್ಹರು ಅಂತ ಹೇಳಿದವರಿಗೆ ಮತದಾರರೇ ತಕ್ಕ ಪಾಠ ಕಲಿಸಿದ್ದಾರೆ. ನಾನು ಅನರ್ಹನಲ್ಲ. ಯಾರು ರಾಜಿನಾಮೆ ಕೊಟ್ಟರೂ ನನಗೆ ಸಂಬಂಧವಿಲ್ಲ. ಆ ಬಗ್ಗೆ ನಾನು ಮಾತಾಡೋದಿಲ್ಲ. ಜನ ನನ್ನ ಗೆಲ್ಲಿಸಿದ್ದು ಬಿಜೆಪಿ ಮುಖೇನ ಒಳ್ಳೆಯ ಕೆಲಸ ಮಾಡ್ತೀನಿ. ಯಾವ ಹುದ್ದೆ ಕೊಟ್ಟರೂ ನಿಭಾಯಿಸುತ್ತೇನೆ.
-ಬೈರತಿ ಬಸವರಾಜು, ಬಿಜೆಪಿ ವಿಜೇತ ಅಭ್ಯರ್ಥಿ

ಜನರ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ. ಕಾಂಗ್ರೆಸ್‌ ಗೆಲ್ಲಲೇಬೇಕಾದ ಕೆ.ಆರ್‌.ಪುರ ಕ್ಷೇತ್ರ ಅರವತ್ತು ಸಾವಿರ ಮತಗಳಿಂದ ಹಿನ್ನಡೆ ಅನುಭವಿಸಿರುವುದು ಈಗಲೂ ನನಗೆ ನಂಬಲಾಗುತ್ತಿಲ್ಲ. ಇವಿಎಂ ಮಿಷನ್‌ ಮೇಲೆ ಅನುಮಾನ ಮೂಡುತ್ತಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ.
-ಎಂ.ನಾರಾಯಣಸ್ವಾಮಿ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next