Advertisement

ಬೈಂದೂರು-ಶಿರೂರು: ಈ ಬೇಸಗೆಯಲ್ಲೂ ಸಮಸ್ಯೆ ತಪ್ಪದು

06:15 AM Mar 13, 2018 | Team Udayavani |

ಬೈಂದೂರು ಹೊಸ ತಾಲೂಕು. ಹತ್ತು ಹಲವು ಹೊಸ ಕನಸುಗಳನ್ನು ಕಟ್ಟಿಕೊಂಡಿದೆ. ಆದರೆ ಇವೆಲ್ಲದರ ಬಣ್ಣ ಕಳೆಯಲಿಕ್ಕೆ ಕುಡಿಯುವ ನೀರಿನ ಸಮಸ್ಯೆಯೊಂದೇ ಸಾಕು. ಮುಂದಿನ ಬೇಸಗೆಗಾದರೂ ಶಾಶ್ವತ ಯೋಜನೆ ಬಂದರೆ ಜನರು ಬದುಕಿಯಾರು.

Advertisement

ಬೈಂದೂರು: ಕಳೆದ ವರ್ಷದ ಬೇಸಗೆಯಲ್ಲಿ ಅನುಭವಿಸಿದ್ದು ಈ ವರ್ಷವೂ ಅನುಭವಿಸಲಿಕ್ಕುಂಟು ಎಂದು ಒಂದೇ ಮಾತಿನಲ್ಲಿ ಹೇಳ ಬಹುದೇನೋ? ಹಾಗಿದೆ ಈ ವರ್ಷದ ಪರಿಸ್ಥಿತಿ. 

ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳನ್ನು ಹೊರತು ಪಡಿಸಿದರೆ ಬಹುತೇಕ ಭಾಗಗಳಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈ ವರ್ಷವೂ ಅದೇ ಸ್ಥಿತಿ ಇದ್ದಂತೆ ತೋರುತ್ತಿದೆ.

ಯಡ್ತರೆ ಗ್ರಾಮದ ಗರ್ಜಿನ ಹಿತ್ಲು, ಸಾಹೇಬರ ಹಿತ್ಲು, ಗುರ್ಗಿಬೆಟ್ಟು, ಹೊಳ್ಲರಹಿತ್ಲು, ಅಂಗಡಿ ಹಿತ್ಲು, ಕುದ್ರಿ ಹಿತ್ಲು, ಕುಳ್ಳಿಹಿತ್ಲು, ಬಂಕೇಶ್ವರ  ವಠಾರ, ಬೀರನಕೇರಿ ವಠಾರ, ಮಾರ್ಕೆಟ್‌ ಹಾಗೂ ಪೇಟೆ ವಠಾರ, ಶಿರೂರು ಗ್ರಾಮದ ಹಡವಿನಕೋಣೆ, ಕಳುಹಿತ್ಲು, ಕೆಸರಕೋಡಿ, ಕರಾವಳಿ, ದೊಂಬೆ, ಪಡುವರಿ ಗ್ರಾಮದ ಚರ್ಚ್‌ ರಸ್ತೆ ಮುಂತಾದೆಡೆ ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದೆ.

ಬಹುಗ್ರಾಮ ಯೋಜನೆ ಎಂಬ ಕನಸು
ಈ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯದ ಇತರೆಡೆ ಕಂಡ ಕನಸು ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ತಾಲೂಕಿನ ಬಿಜೂರು, ಯಡ್ತರೆ, ಬೈಂದೂರು, ಪಡುವರಿ, ಶಿರೂರು ಗ್ರಾಮಗಳನ್ನು ಸೇರಿಸಿ 24 ಕೋಟಿ ರೂ. ಅನುದಾನದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪ್ರಸ್ತಾವನೆ  ಸಲ್ಲಿಸಲಾಗಿದೆ. ಆದರೆ ಅದಕ್ಕಿನ್ನೂ ಅನುಮೋದನೆ ದೊರೆತಿಲ್ಲ. ತಾಲೂಕಿನಲ್ಲಿ ಒಂದೂ ಶಾಶ್ವತ ಯೋಜನೆಗಳು ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎಂಬುದು ಪರಿಣಿತರ ಅಭಿಪ್ರಾಯ.

Advertisement

ಟ್ಯಾಂಕರ್‌ ನೀರು ಪೂರೈಕೆ
ಬೈಂದೂರು, ಯಡ್ತರೆ ಶಿರೂರುಗಳಲ್ಲಿ ಪ್ರತಿವರ್ಷವೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಈ ವರ್ಷವೂ ಅದೇ ಮುಂದುವರಿಯುವ ಸಂಭವವಿದೆ.

ಯಡ್ತರೆ
ಯಡ್ತರೆ ಗ್ರಾಮದ ಜನಸಂಖ್ಯೆ 9,627. ಒಂಬತ್ತು ವಾರ್ಡ್‌ಗಳಿವೆ. 2016ರಲ್ಲಿ ಕುಡಿಯುವ ನೀರು ನಿರ್ವಹಣೆಗೆ 4.95 ಲಕ್ಷ ರೂ. ಹಾಗೂ 2017 ರಲ್ಲಿ 5.60 ಲಕ್ಷ ಸಾವಿರ ರೂ. ಗಳನ್ನು ಜಿಲ್ಲಾಡಳಿತ ನೀಡಿದೆ. ಪ್ರತಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. 

ಒಟ್ಟು ನಾಲ್ಕು ತೆರೆದ ಬಾವಿಗಳಿವೆ. ನಾಲ್ಕು ಕೊಳವೆ ಬಾವಿಗಳ ಪೈಕಿ ಎರಡು ಮಾತ್ರ ಸುಸ್ಥಿತಿಯಲ್ಲಿವೆ. 14ನ ಹಣಕಾಸು ಯೋಜನೆಯಲ್ಲಿ ಕಲ್ಲಣಿR ಬಳಿ ಬಾವಿ ತೆರೆಯಲಾಗಿತ್ತು. ಆದರೆ ನಿರೀಕ್ಷಿಸಿದಷ್ಟು ನೀರು ಸಿಗಲಿಲ್ಲ. ಈಗ ಹತ್ತಿರದ ಹೊಳೆಯಿಂದ ಪೈಪ್‌ಲೈನ್‌ ಹಾಕಿ ನೀರು ಪೂರೈಸಬೇಕಿದ್ದು, ಸ್ಥಳೀಯರ ವಿರೋಧವಿದೆ. ಜಿಲ್ಲಾಡಳಿತ ಈ ಸಂಬಂಧ ಕ್ರಮ ಕೈಗೊಳ್ಳಬೇಕಿದೆ.

ಶಿರೂರು
ಶಿರೂರು ಗ್ರಾಮ ಒಟ್ಟು 17,501 ಜನಸಂಖ್ಯೆ ಹೊಂದಿದೆ. ಕಳೆದ ವರ್ಷ 6 ಲಕ್ಷ ರೂ.ಗಳನ್ನು ಕುಡಿಯುವ ನೀರಿಗಾಗಿ ವ್ಯಯಿಸಿದೆ. ಕೋಣಮಕ್ಕಿಯಲ್ಲಿ ಎರಡು ತೆರೆದ ಬಾವಿಗಳಿದ್ದು, ನಿರ್ವಹಣೆ ಕೊರತೆಯಿದೆ. 3 ಕೊಳವೆ ಬಾವಿ, 3 ಓವರ್‌ ಟ್ಯಾಂಕ್‌, 28 ಸಣ್ಣ ಬೋರ್‌ವೆಲ್‌ಗ‌ಳಿದ್ದರೂ ನೀರಿನ ಸಮಸ್ಯೆ ಮುಂದುವರಿದಿದೆ. ಒಟ್ಟು 800 ನಳ್ಳಿ ಸಂಪರ್ಕ ನೀಡಿದ್ದು, ಕನಿಷ್ಟ 50 ರೂ. ಶುಲ್ಕವನ್ನು ಪಂಚಾಯತ್‌ ಪಡೆಯುತ್ತಿದೆ. ಬಹುತೇಕ ಭಾಗಗಳಲ್ಲಿ ಉಪ್ಪು ನೀರು ಆವೃತ್ತವಾಗಿರುವುದೂ ಸಮಸ್ಯೆಯನ್ನು ತೀವ್ರಗೊಳಿಸಿದೆ. ಕೇವಲ ಪಂಚಾಯತ್‌ ಮಾತ್ರವಲ್ಲದೆ ಕೆಲವು ದಾನಿಗಳ ನೆರವಿನಿಂದಲೂ ಗ್ರಾಮದ ಕೆಲವು ವಾರ್ಡ್‌ಗಳಿಗೆ ನೀರು ಹರಿಸಲಾಗುತ್ತದೆ.

ಜಿಲ್ಲಾಡಳಿತಕ್ಕೆ ಪ್ರಸ್ತಾವನೆ
ಈ ವರ್ಷ ಬೇಸಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 8 ಲಕ್ಷ ರೂ. ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಬೈಂದೂರು ಗ್ರಾಮ ಪಂಚಾಯತ್‌ ಸಲ್ಲಿಸಿದೆ. ಹಾಗೆಯೇ ಶಿರೂರು ಪಂಚಾಯತ್‌ ಪರವಾಗಿ 7 ಲಕ್ಷ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಸಮಸ್ಯೆ ಪರಿಹಾರಕ್ಕೆ ಗರಿಷ್ಠ ಪ್ರಯತ್ನ
ಬೈಂದೂರು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಪಂಚಾಯತ್‌ ಗರಿಷ್ಠ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ಈ ವರ್ಷ ಹೊಸದಾಗಿ ಒಂದು ಕೊಳವೆ ಬಾವಿ ತೆಗೆಯಲಾಗಿದೆ. ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಒಂದು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇನ್ನೊಂದು ಭಾಗದಲ್ಲಿ ನೀರಾವರಿ ಪೂರೈಕೆಯ ಅವಕಾಶಗಳಿವೆ. ಕಲ್ಲಣಿRಯಲ್ಲಿ ಪ್ರಸ್ತಾಪಿತ ಯೋಜನೆ ಸಾಕಾರಗೊಂಡರೆ ಬಹುತೇಕ ಬೈಂದೂರಿನ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಜಿಲ್ಲಾಡಳಿತ ಈ ಬಗ್ಗೆ ಪ್ರಯತ್ನಿಸಬೇಕಿದೆ.

–  ರುಕ್ಕನ ಗೌಡ, ಪಿಡಿಒ ಯಡ್ತರೆ

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ಕುಂದಾಪುರ – ಕಾರ್ಕಳ ಗ್ರಾಮೀಣ ಭಾಗದ ಹಲವು ಪ್ರದೇಶಗಳ ಲೇಖನಗಳು ಮೂಡಿಬರಲಿವೆ. ನಿಮ್ಮ ಭಾಗದಲ್ಲೂ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು. ವಾಟ್ಸಾéಪ್‌ ನಂಬರ್‌ 91485 94259

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next