ಬೈಂದೂರು: ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಗೆ ಹೊಂದಿಕೊಂಡ ಅಪ್ಪಟ ಗ್ರಾಮೀಣ ಸೊಗಡಿನ ಗ್ರಾಮ ಕಾಲ್ತೋಡು. ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕೊಂಡಿಯಿಂದ ಕೊಲ್ಲೂರಿನವರೆಗೆ ಸಂಪರ್ಕ ಹೊಂದಿದೆ. ಆದರೂ ಒಡವೆ ಇದ್ದರೂ ಬಡವಿ ಎನ್ನುವಂತಿದೆ.
ಈ ಮಾತಿಗೆ ಕಾರಣವಿಷ್ಟೇ. ಇಲ್ಲಿನ ಗ್ರಾಮಸ್ಥರ ಮುಖ್ಯ ಕಸುಬು ಕೃಷಿ. ಅಕ್ಕ ಪಕ್ಕದ ಗ್ರಾಮಗಳು ಪ್ರಗತಿಯಾದರೂ ಈ ಗ್ರಾಮ ಇನ್ನೂ ಅಭಿವೃದ್ಧಿಯ ಕನಸು ಕಾಣುತ್ತಿದೆಯಷ್ಟೇ.
ಕಾಲ್ತೋಡು ಗ್ರಾಮವೂ ಸೇರಿದ ಗ್ರಾ.ಪಂ ನಲ್ಲಿ ಕಪ್ಸೆ, ಕೂರ್ಸಿ,ಬೋಳಂಬಳ್ಳಿ, ಮೂರೂರು, ಬ್ಯಾಟಿಯಾಣಿ, ಚಪ್ಪರಕಿ, ಮೆಟ್ಟಿನಹೊಳೆ ಪ್ರದೇಶಗಳು ಬರುತ್ತವೆ. 13 ಜನ ಗ್ರಾ.ಪಂ ಸದಸ್ಯರು, 5 ವಾರ್ಡ್ ಗಳಿದ್ದು ಒಟ್ಟು 10 ಸಾವಿರ ಹೆಕ್ಟೇರ್ ವಿಸ್ತೀರ್ಣವಿದೆ. ಜನಸಂಖ್ಯೆ 5172.
ಪ್ರೌಢಶಾಲೆ ಬಹುವರ್ಷದ ಬೇಡಿಕೆ
ಕಾಲ್ತೋಡು ಗ್ರಾಮದಲ್ಲಿ 10 ಪ್ರಾಥಮಿಕ ಶಾಲೆಗಳು, 9 ಅಂಗನವಾಡಿ ಕೇಂದ್ರಗಳಿವೆ. ಆದರೆ ಪ್ರೌಢಶಾಲೆಯಿಲ್ಲದೇ ವಿದ್ಯಾರ್ಥಿಗಳು ದೂರದ ಕಂಬದಕೋಣೆ, ಅರೆಶಿರೂರು ಮುಂತಾದೆಡೆಗೆ ತೆರಳಬೇಕಿದೆ. ಯಡೇರಿ, ಕಾಲ್ತೋಡು, ಚಪ್ಪರ, ಒಲ್ದೋಗ್, ಬೋಳಂಬಳ್ಳಿ, ಮೆಟ್ಟಿನಹೊಳೆ ಸೇರಿದಂತೆ ಎಲ್ಲ ಭಾಗದ ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ಹಲವು ಕಿ.ಮೀ. ನಡೆದು ಬರಬೇಕಾದ ಸ್ಥಿತಿಯಿದೆ.
ಮುಕ್ಕಾಲು ಭಾಗ ಅರಣ್ಯ ವ್ಯಾಪ್ತಿ ಹೊಂದಿರುವ ಈ ಗ್ರಾಮದ ಒಂದು ಭಾಗ ಮಾತ್ರ ಕೊಂಚ ಅಭಿವೃದ್ಧಿಗೊಂಡಿದೆ. ಮಳೆಗಾಲದಲ್ಲಿ ಇಲ್ಲಿ ಅಕ್ಷರಶಃ ಸಮಸ್ಯೆಯ ಆಗರ. ನದಿ ತೊರೆಗಳು ತುಂಬಿ ಹರಿಯುತ್ತಿವ ಕಾರಣ ವಿದ್ಯಾರ್ಥಿಗಳು ಕಾಲು ಸಂಕ, ತೂಗು ಸೇತುವೆಗಳನ್ನೇ ದಾಟಿ ಬರಬೇಕು. 10 ಪ್ರಾ. ಶಾಲೆಗಳಿರುವ ಈ ಊರಿಗೆ ಒಂದು ಪ್ರೌಢಶಾಲೆ ಬೇಕೇ ಬೇಕಾಗಿದೆ. ಹಲವು ವರ್ಷ ಗಳಿಂದ ಬೇಡಿಕೆ ಸಲ್ಲಿಸು ತ್ತಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.
ರಸ್ತೆಗಳ ಅಭಿವೃದ್ಧಿಗೂ ಗಮನ ಕೊಡಬೇಕಿದೆ. ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಹೊರತುಪಡಿಸಿದರೆ ಒಳ ಭಾಗದಲ್ಲಿ ರಸ್ತೆಗಳೇ ಇಲ್ಲ ಎನ್ನುವುದು ಸ್ಥಳೀಯರ ಅಳಲು. ಮಳೆಗಾಲದಲ್ಲಿ ರಸ್ತೆಯೆಲ್ಲಾ ಕೆಸರುಮಯ. ಮುಖ್ಯವಾಗಿ ಯಡೇರಿ ಬಲ್ಲೋಣ್ ಭಾಗಕ್ಕೆ ಸಂಚರಿಸುವುದೇ ದುಸ್ತರ. ಕಾಲೊ¤àಡು, ಬವಳಾಡಿ ಮೂಲಕ ಬೈಂದೂರು ತಲುಪುವುದು ಹತ್ತಿರದ ದಾರಿ. ಆದರೆ ರಸ್ತೆ ನಿರ್ಮಾಣವಾಗದ ಕಾರಣ ತಾಲೂಕು ಕೇಂದ್ರಕ್ಕೆ ಹತ್ತಾರು ಕಿ.ಮೀ ಸುತ್ತಿಬಳಸಿ ತಲುಪಬೇಕಿದೆ. ರಸ್ತೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಅನುದಾನ ಅಗತ್ಯವಿದೆ. ಗ್ರಾ.ಪಂ. ಅನುದಾನದಲ್ಲಿ ಸಾಧ್ಯವಿಲ್ಲ ಎನ್ನುವುದು ಪಂಚಾಯತ್ ಅಭಿಪ್ರಾಯ. ಹಾಗಾಗಿ ಒಳ ರಸ್ತೆಗಳೆಲ್ಲ ಆದ್ಯತೆ ಮೇರೆಗೆ ಅಭಿವೃದ್ಧಿಯಾಗಬೇಕಿದೆ.
ಆಸ್ಪತ್ರೆ ಇದೆ, ವೈದ್ಯರು ಬೇಕು
ಕೃಷಿ ಈ ಊರಿನ ಪ್ರಮುಖ ಉದ್ಯೋಗವಾಗಿದ್ದು ಕೃಷಿಕರಿಗೆ ಅನುಕೂಲವಾಗುವ ವಾತಾವರಣ ಕಲ್ಪಿಸಬೇಕಿದೆ. ಪ್ರತೀ ಕೆಲಸಕ್ಕೂ ಕಂಬದಕೋಣೆ, ಬೈಂದೂರು, ಉಪ್ಪುಂದಕ್ಕೆ ತೆರಳಬೇಕಿದೆ. ಮುಖ್ಯವಾಗಿ ಹೈನುಗಾರಿಕೆ ಇಲ್ಲಿನವರ ಉದ್ಯೋಗವಾಗಿದ್ದು, ಪಶು ಆಸ್ಪತ್ರೆಯೂ ಇದೆ. ಆದರೆ ಪಶುವೈದ್ಯರು ಮಾತ್ರ ಆಯ್ದ ದಿನಗಳಲ್ಲಿ ಮಾತ್ರ ಲಭ್ಯ. ಜತೆಗೆ ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಇತರೆ ಗ್ರಾಮಗಳ ಹೆಚ್ಚುವರಿ ಹೊಣೆ ಇದ್ದು, ಕೆಲವು ದಿನ ಮಾತ್ರ ಗ್ರಾಮದ ಕೆಲಸಗಳಿಗೆ ಸಿಗುತ್ತಾರೆ. ಇದರಿಂದ ಜನರು ಕಂದಾಯ ಸಂಬಂಧಿ ಕೆಲಸಕ್ಕೆ ದಿನವಿಡೀ ಕಾಯುವುದು , ಹಲವಾರು ಬಾರಿ ಅಲೆದಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಖಾಯಂ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಿಸಬೇಕಿದೆ.
ಸೂಕ್ತ ಸೌಲಭ್ಯ ಕಲ್ಪಿಸಿ: ಮುಖ್ಯವಾಗಿ ರಸ್ತೆ ಮತ್ತು ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಪಂಚಾಯತ್ ಅನುದಾನದಲ್ಲಿ ದೊಡ್ಡ ರಸ್ತೆ ನಿರ್ಮಾಣ ಸಾಧ್ಯವಾಗದು. ಒಳ ರಸ್ತೆಗಳ ಅಭಿವೃದ್ಧಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಬೇಕಿದೆ. –
ನೇತ್ರಾವತಿ ಆಚಾರ್ಯ, ಅಧ್ಯಕ್ಷರು, ಕಾಲ್ತೋಡು ಗ್ರಾಮ ಪಂಚಾಯತ್.
ಅಭಿವೃದ್ಧಿಗೆ ಗಮನಹರಿಸಿ: ಪ್ರತಿದಿನ ಪೇಟೆಗೆ ಬರಲು ಹಲವು ಕಿ.ಮೀ.ನಡೆದು ಬರಬೇಕು. ಯಾವ ಭಾಗಕ್ಕೂ ಸರಿಯಾದ ಬಸ್ಸು ಹಾಗೂ ರಸ್ತೆಗಳಿಲ್ಲ.ಮಳೆಗಾಲದಲ್ಲಿ ಶಾಲೆ ಮಕ್ಕಳು ಮನೆ ಸೇರುವಾಗ ರಾತ್ರಿಯಾಗುತ್ತದೆ. ಮುಖ್ಯ ರಸ್ತೆ ಹೊರತು ಪಡಿಸಿದರೆ ಉಳಿದ ಹಲವು ರಸ್ತೆಗಳು ಇನ್ನೂ ಡಾಮರು ಕಂಡಿಲ್ಲ. ಇವುಗಳ ಅಭಿವೃದ್ಧಿಗೆ ಪಂಚಾಯತ್, ಜನಪ್ರತಿನಿಧಿಗಳು ಗಮನಹರಿಸಬೇಕಿದೆ. –
ಸುರೇಂದ್ರ ಗೌಡ, ಸ್ಥಳೀಯರು
-ಅರುಣ್ ಕುಮಾರ್ ಶಿರೂರು