ಬೈಂದೂರು: ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ಸಂದರ್ಭ ಹೊಟೇಲ್‌ನಲ್ಲಿ ಚಹಾ ಕುಡಿಯಲು ನಿಲ್ಲಿಸಿದ ವೇಳೆ ವ್ಯಕ್ತಿಯೊಬ್ಬರ ಚಿನ್ನಾಭರಣವಿದ್ದ ಬ್ಯಾಗ್ ಕದ್ದು ಪರಾರಿಯಾದ ಘಟನೆ ಶಿರೂರಿನಲ್ಲಿ ನಡೆದಿದೆ.
ಮಹಾರಾಷ್ಟ್ರದ ಈಶ್ವರ್ ದಲಿಚಂದ್ ಪೊರ್ವಾಲ್ (48) ಚಿನ್ನಾಭರಣ ಕಳೆದುಕೊಂಡವರು. ಪೊರ್ವಾಲ್‌ನಲ್ಲಿ ಕಳೆದ 10 ವರ್ಷಗಳಿಂದ ಮುಂಬಯಿಯಲ್ಲಿ ಚಿನ್ನ ಖರೀದಿಸಿ ಮಂಗಳೂರು ಮತ್ತು ಹೈದರಾಬಾದ್ ಕಡೆ ಮಾರಾಟ ಮಾಡುತ್ತಿದ್ದರು.
ಜೂನ್ 14ರಂದು ಮುಂಬಯಿಯ ವಿವಿಧ ಚಿನ್ನಾಭರಣ ಅಂಗಡಿಗಳಿಂದ 18 ಲಕ್ಷ ರೂ. ಮೌಲ್ಯದ 466.960 ಗ್ರಾಂ ತೂಕದ ಚಿನ್ನವನ್ನು ಖರೀದಿಸಿದ್ದ ಈಶ್ವರ್ ದಲಿಚಂದ್ ಪೊರ್ವಾಲ್ ಅದನ್ನು ಸ್ಟೀಲ್ ಬಾಕ್ಸ್‌ನಲ್ಲಿರಿಸಿ ಬಳಿಕ ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಮಂಗಳೂರಿಗೆ ಪ್ರಯಾಣಿಸಿದ್ದರು.
ಶಿರೂರು ಗ್ರಾಮದ ನಿರ್ಗದ್ದೆಯಲ್ಲಿ ಚಾಲಕನು ಉಪಹಾರಕ್ಕಾಗಿ ಬಸ್ ನಿಲ್ಲಿಸಿದ್ದು ಈಶ್ವರ್ ದಲಿಚಂದ್ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಸ್ ನ ಕ್ಲೀನರ್ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಸ್ಸಿನ ಒಳಗೆ ಪ್ರವೇಶಿಸಿ ಬ್ಯಾಗನ್ನು ಪರಿಶೀಲಿಸಿ ಬಸ್‌ನಿಂದ ಇಳಿದು ಸ್ವಲ್ಪ ದೂರದಲ್ಲಿ ನಿಲ್ಲಿಸಿದ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾಗಿರುವುದಾಗಿ ಪ್ರಯಾಣಿಕರಲ್ಲಿ ತಿಳಿಸಿದ.
ತತ್‌ಕ್ಷಣ ಈಶ್ವರ್ ದಲಿಚಂದ್ ಪೊರ್ವಾಲ್ ಬಸ್‌ನ ಒಳಗೆ ಹೋಗಿ ತಾನು ಕುಳಿತಿದ್ದ ಸೀಟಿನ ಅಡಿಯಲ್ಲಿ ಪರಿಶೀಲಿಸಿದಾಗ ಬ್ಯಾಗ್ ಇರಲಿಲ್ಲ. ಬಸ್‌ನ ಹಿಂಭಾಗದಲ್ಲಿ ನೋಡಿದಾಗ ಸೂಟ್ ಕೇಸ್ ಬೀಗ ಒಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಅದರೊಳಗಿದ್ದ ಸ್ಟೀಲ್ ಬಾಕ್ಸ್ ತೆರೆದಿದ್ದು ಅದರಲ್ಲಿದ್ದ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.