ಬೈಂದೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಬೈಂದೂರು ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಅಚ್ಚರಿಯ ವಿಚಾರವೆಂದರೆ ಕಳ್ಳತನಕ್ಕೆ ಬಂದವರು ಸಂಘದ ಕಚೇರಿಯೊಳಗೆ ವೆಲ್ಡಿಂಗ್ ಮಾಡುವ ಹೋಲ್ಡರ್ ಮತ್ತು ಹೆಲ್ಮೆಟ್ ಅನ್ನು ಬಿಟ್ಟು ತೆರಳಿರುವುದು.
ಹೌದು ಯಡ್ತರೆ ಗ್ರಾಮದಲ್ಲಿರುವ ಈ ಸಹಕಾರಿ ಸಂಘದ ಕಚೇರಿಗೆ ಅ. 20ರ ಸಂಜೆ 5.30ರಿಂದ ಅ. 21 ರ ಬೆಳಗ್ಗೆ ಮಧ್ಯದ ಅವಧಿಯಲ್ಲಿ ಆಗಮಿಸಿದ್ದ ಕಳ್ಳರು ಯಾವುದೋ ಆಯುಧದಿಂದ ಬ್ಯಾಂಕ್ ನ ಉತ್ತರ ಬದಿಯ ಕಿಟಕಿಯ ಸರಳುಗಳನ್ನು ಕತ್ತರಿಸಿ, ಒಳ ಪ್ರವೇಶಿಸಿದ್ದಾರೆ. ಬಳಿಕ ಕಿಟಕಿಗಳಿಗೆ ಕಪ್ಪು ಬಣ್ಣದ ಟರ್ಪಾಲುಗಳನ್ನು, ಅಲ್ಲಲ್ಲಿ ಬಟ್ಟೆಗಳನ್ನು ಹಾಕಿ, ವೆಲ್ಡಿಂಗ್ ಮೆಷಿನ್‌ನಿಂದ ಲಾಕರನ್ನು ತೆರೆ ಯಲು ಪ್ರಯತ್ನಿಸಿದ್ದಾರೆ. ಬ್ಯಾಂಕಿನ ನಗದು ಕೌಂಟರ್ ಬಳಿಯ ಕಿಟಕಿಯ ಬಾಗಿಲನ್ನು ತೆರೆದು ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಸಿಸಿ ಕೆಮರಾದ ವಯರ್‌ಗಳನ್ನು ಕೂಡ ಕತ್ತರಿಸಿದ್ದು, ಸೈರನ್ ವಯರ್‌ಗಳನ್ನು ಸಹ ಕತ್ತರಿಸಿದ್ದಾರೆ. ಲಾಕರ್ ಬಳಿ ಹೋಲ್ಡರ್ ಹಾಗೂ ಹೆಲ್ಮೆಟ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನ ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಎಸ್‌ಐ ಶ್ರೀನಿವಾಸ ಗೌಡ, ಸಿಬಂದಿ, ಬೆರಳಚ್ಚು ತಜ್ಞರು, ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎನ್. ರಾಮ ಅವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊರಗಿನವರ ಕೃತ್ಯ?
ಪೊಲೀಸ್ ಮಾಹಿತಿ ಪ್ರಕಾರ ಇದು ಸ್ಥಳೀಯರ ಕೃತ್ಯವಾಗಿರಲು ಸಾಧ್ಯವಿಲ್ಲ, ಹೊರಗಿನವರ ತಂಡವೊಂದು ಈ ಕಳ್ಳತನಕ್ಕೆ ಯತ್ನಸಿರಬಹುದು ಎಂದು ತಿಳಿದು ಬಂದಿದೆ. ಕಳ್ಳತನಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ತಂದಿರುವುದು ನೋಡಿದರೆ, ಪರಿಣತ ಕಳ್ಳರ ತಂಡದ್ದೆ ಕೃತ್ಯ ಇರಬಹುದು ಎನ್ನಲಾಗುತ್ತಿದ್ದು, ಕೆಲ ಪರಿಕರಗಳನ್ನು ಅಲ್ಲಿಯೇ ಬಿಟ್ಟಿರುವುದರಿಂದ ಯಾರೋ ಬಂದರೆಂದು ಅಲ್ಲಿಂದ ಓಡಿ ಹೋಗಿರಬಹುದು ಎನ್ನುವ ಸಂಶಯ ಮೂಡಿದೆ.