Advertisement

Byndoor Election 2023; ಬೈಂದೂರಿನ ಜನ ಆಶೀರ್ವಾದ ಮಾಡುವ ವಿಶ್ವಾಸ: ಗುರುರಾಜ್‌ ಗಂಟಿಹೊಳೆ

12:57 PM Apr 28, 2023 | Team Udayavani |

ಕುಂದಾಪುರ: ನಾವು ಏನಾದರೂ ವ್ಯಾಪಾರ, ವ್ಯವಹಾರ ಆರಂಭಿಸುವಾಗ ವ್ಯವಹಾರಕ್ಕೆ ಒಳ್ಳೆಯದಾಗಲಿ ಅಂತ ದೇವರ ಬಳಿಗೆ ಹೋಗಿ ಭಕ್ತಿಯಿಂದ ಕೇಳುತ್ತೇವೆ. ಅದೇ ರೀತಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಾನು ನಿಮ್ಮನ್ನೇ ದೇವರಂತೆ ಭಾವಿಸಿ, ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ. ಬೈಂದೂರಿನ ಜನ ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಹೇಳಿದರು.

Advertisement

ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ ಸಮೀಪದ ಜಾಡ್ಕಟ್ಟುವಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಟಿಕೆಟ್‌ ಘೋಷಣೆಯಾದ 5 ನಿಮಿಷದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ, ಹೆಮ್ಮೆಯ ಬಿಜೆಪಿ ಪಕ್ಷದ ಅಭ್ಯರ್ಥಿ ನೀವು. ನಾವು ನಿಮ್ಮೊಂದಿಗೆ ನಿಂತು, ಗೆಲ್ಲಿಸಿ ಕೊಡುತ್ತೇವೆ. ಊರು ಒಳ್ಳೆಯದು ಮಾಡುವ ಅಂದಿದ್ದರು. ನನ್ನಂತೆ ಅವರು ಸಹ ಸಾಮಾನ್ಯ ಮನೆಯಿಂದ ಬಂದವರು ಎಂದು ಗಂಟಿಹೊಳೆ ಹೇಳಿದರು.

ಸಮರ್ಥ ವ್ಯಕ್ತಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಜನಸಾಮಾನ್ಯರ ಮುಂದೆ ಓಡಾಟ ಮಾಡಿದವರು. ಸಂಘಟನೆ, ಪಕ್ಷದ ಪರಿಪೂರ್ಣ ಕಲ್ಪನೆ ಇರುವವರು. ಸಾಮಾನ್ಯ ಜನರೊಂದಿಗೆ ಬೆರೆಯುವ ಗುರುರಾಜ್‌ ಗಂಟಿಹೊಳೆ ಅವರು ವಿಧಾನಸೌಧಕ್ಕೆ ಹೋದರೆ, ಪರಿಣಾಮಕಾರಿ ಕೆಲಸಗಳಾಗುತ್ತವೆ. ಎಲ್ಲ ವರ್ಗದ ಜನರ ಧ್ವನಿಯಾಗುತ್ತಾರೆ. ನಿಶ್ಚಯವಾಗಿ ಬಿಜೆಪಿ ಬೈಂದೂರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ರಾಜ್ಯ ಮೋರ್ಚಾ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಪ್ರಮುಖರಾದ ಶರತ್‌ ಶೆಟ್ಟಿ, ಸಂತೋಷ್‌ ಪೂಜಾರಿ, ಗಿರೀಶ್‌ ನಾಯ್ಕ, ಕರಣ್‌ ಪೂಜಾರಿ, ಪದಾಧಿಕಾರಿಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

ಹೋಟೆಲ್‌ ಬಿಲ್ಲಲ್ಲೂ ಗಂಟಿಹೊಳೆ..
ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್‌ ಗಂಟಿಹೊಳೆ ಅವರ ಬಗ್ಗೆ ರಾಜ್ಯ ವ್ಯಾಪಿಯಾಗಿ ಚರ್ಚೆಗಳು ನಡೆಯುತ್ತಿದೆ. ಇಷ್ಟೇ ಅಲ್ಲದೆ ಬೈಂದೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಅವರ ಬಗ್ಗೆ ವಿಶೇಷ ಅಭಿಮಾನ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದ್ದು, ” ಈ ಬಾರಿ ಗುರುರಾಜ್‌ ಗಂಟಿಹೊಳೆ ಜೈ ಬಿಜೆಪಿ’ ಎಂದು ಬರೆಯಲಾದ ಬೆಂಗಳೂರಿನಲ್ಲಿರುವ ಉಡುಪಿ ಮೂಲದ ಹೋಟೆಲ್‌ವೊಂದರ ಬಿಲ್‌ ಈಗ ವೈರಲ್‌ ಆಗುತ್ತಿದೆ.

ನಮ್ಮಲ್ಲಿ ಅಭ್ಯರ್ಥಿಯಾಗುವವರೆಗೆ 8 ಜನ, ಅಭ್ಯರ್ಥಿ ಘೋಷಣೆಯಾದ ಅನಂತರ ನಾವು ನೂರೆಂಟು ಜನ. ಎಲ್ಲರದು ಒಂದೇ ಅಭಿಪ್ರಾಯ ಪಕ್ಷ ಗೆಲ್ಲಬೇಕು ಎನ್ನುವುದು. ಕಾರ್ಯಕರ್ತರು ಒಪ್ಪಿದ್ರು ಅಂದರೆ ಚುನಾವಣೆ ಗೆದ್ದಂತೆಯೇ ಸರಿ. ಆ ಧೈರ್ಯ ನನಗೆ ಪಕ್ಷದ ಟಿಕೆಟ್‌ ಪಡೆದು ಬೆಂಗಳೂರಿನಿಂದ ಬೈಂದೂರಿಗೆ ಆಗಮಿಸಿದ ದಿನವೇ ಅರಿವಾಯಿತು. ಆ ದಿನ 12 ಗಂಟೆ ರಾತ್ರಿಗೆ ಬೈಂದೂರಲ್ಲಿ ಒಂದೂವರೆ ಸಾವಿರಕ್ಕೂ ಮಿಕ್ಕಿ ಜನ ಸೇರಿ, ನನ್ನನ್ನು ಸ್ವಾಗತಿಸಿದ್ದರು. ಆಗಲೇ ನನಗೆ ಯುದ್ಧ ಗೆಲ್ಲುವ ವಿಶ್ವಾಸ ಬಂದಿತ್ತು.
-ಗುರುರಾಜ್‌ ಗಂಟಿಹೊಳೆ, ಬೈಂದೂರು ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next