Advertisement

ಬೈಲಹೊಂಗಲ: ಈ ಮಲ್ಲೇಶ ಕೃಷಿಯಲ್ಲಿ ಮಲ್ಲ; ‌ಕ್ಯಾರಟ್‌ ಬೆಳೆಯಿಂದ ನಿರೀಕ್ಷಿತ ಆದಾಯ

02:46 PM May 29, 2023 | Team Udayavani |

ಬೈಲಹೊಂಗಲ: ತಾಲೂಕಿನ ಮದನಭಾವಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶ ಬಸಲಿಂಗಪ್ಪ ಗುಜನಾಳ ತಮ್ಮ ಹೊಲದಲ್ಲಿ ಬಾಳೆ, ಗಜ್ಜರಿ(ಕ್ಯಾರಟ್), ಬಳ್ಳೊಳ್ಳಿ, ಸೋಯಾಬಿನ್‌ ಬೆಳೆ ಬೆಳೆದು ಯಶಸ್ವಿ ಕೃಷಿ ಮಾಡುವ ಮೂಲಕ ಭರಪೂರ ಆದಾಯ ಗಳಿಸುತ್ತಿದ್ದಾರೆ.

Advertisement

ಎರಡು ಎಕರೆ ತೋಟದಲ್ಲಿ ಬಾಳೆ ಗಿಡಗಳನ್ನು ಬೆಳೆಸಿ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿರುವುದಲ್ಲದೆ, ಸೋಯಾಬಿನ್‌, ಬಳ್ಳೊಳ್ಳಿ ಒಳಗೊಂಡಂತೆ ತಮ್ಮ ಹೊಲದ ಇತರ  ಬೆಳೆಯಿಂದ ವಾರ್ಷಿಕವಾಗಿ 15 ಲಕ್ಷಕ್ಕಿಂತ ಹೆಚ್ಚು
ಆದಾಯ ಗಳಿಸುವ ಮೂಲಕ ಸಂತಸದ ಜೀವನ ಸಾಗಿಸುತ್ತಿದ್ದಾರೆ.

ಒಟ್ಟು 30 ಏಕರೆ ಹೊಲ ಹೊಂದಿರುವ ಇವರು 2022 ರಲ್ಲಿ ಗಜ್ಜರಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದು, ಒಂದು ಏಕರೆ ಪ್ರದೇಶದಲ್ಲಿ ಬಳ್ಳೊಳ್ಳಿ ಬೆಳೆದಿದ್ದಾರೆ. ಉಳಿದ 25 ಏಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಈ ಭಾಗದ ಮುಖ್ಯ
ಬೆಳೆಯಾದ ಸೋಯಾಬಿನ್‌ ಬೆಳೆಯುತ್ತಾರೆ.

ನೋಡುಗರ ಸೆಳೆಯುವ ಬಾಳೆ ತೋಟ: ಎರಡು ವರ್ಷಗಳಿಂದ ಎರಡು ಎಕರೆಯಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ಸದ್ಯ 40 ಸಾವಿರ ಖರ್ಚು ಮಾಡಿದ್ದು, ದಿನಂಪ್ರತಿ 10 ಡಜನ್‌ ಬಾಳೆ ಹಣ್ಣನ್ನು ಗ್ರಾಮದಲ್ಲಿಯೇ ಮಾರುತ್ತಾರೆ. ಕೆಲವು ಬಾರಿ ನೇಸರಗಿ ಸಂತೆಯಲ್ಲೂ ಬಾಳೆ ಹಣ್ಣನ್ನು ಮಾರಿ ಆದಾಯ ಮಾಡಿಕೊಳ್ಳುತ್ತಾರೆ. ಇದು ಜವಾರಿ ಬಾಳೆ ಹಣ್ಣು ಇರುವದರಿಂದ ಒಂದು ಡಜನ್‌ಗೆ 40 ರೂ. ದೊರಕುತ್ತದೆ.

ಬಾಳೆ ಬೆಳೆಯುವ ಸಂದರ್ಭದಲ್ಲಿ ಡಿಎಪಿ ರಾಸಾಯನಿಕ ಗೊಬ್ಬರ, 10 ಟ್ರಾಕ್ಟರ್‌ ತಿಪ್ಪೆಗೊಬ್ಬರ ಹಾಕಿದ್ದಾರೆ. ನಂತರ ಪೊಟ್ಯಾಶ್‌, ಯೂರಿಯಾ ಸಹ ಭೂಮಿಗೆ ಹಾಕಿ ಫಲವತ್ತಾಗಿ ಬೆಳೆ ಬರುವಂತೆ ಬೆಳೆಸಿದ್ದಾರೆ. ಬಾಳೆ ಬಲಿತ ಬಳಿಕ ಕಸ, ಕಡ್ಡಿ ಮತ್ತು ಬಾಳೆ ಒಣ ಗರಿ ಸ್ವಚ್ಚಗೊಳಿಸಬೇಕಾಗುತ್ತದೆ. ಮಳೆಯನ್ನೇ ನಂಬಿ ಕೃಷಿ ಮಾಡಬೇಕಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಲ್ಲೇಶ ಅವರು ತಮ್ಮ ಹೊಲದಲ್ಲಿರುವ ಹಳೆಯ ಬಾವಿ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಾರೆ.

Advertisement

ಇದರಿಂದ ಬೆಳೆಗೆ ಉತ್ತಮ ನೀರು ಲಭಿಸುತ್ತಿದೆ. ಇವರು ಒಂದು ಜೋಡಿ ಎತ್ತು, ಟ್ರಾಕ್ಟರ್‌ ಮೂಲಕ ಉಳಿಮೆ ಮಾಡುತ್ತಾರೆ. ಅವಿಭಕ್ತ ಕುಟುಂಬದಿಂದ ಬಂದಿರುವ ಇವರಿಗೆ ಸಹೋದರರು ಸೇರಿದಂತೆ ರೈತ ಕಾರ್ಮಿಕರು ಸಹಾಯ ಮಾಡುತ್ತಾರೆ.

ಗಜ್ಜರಿಯಿಂದ ನಿರೀಕ್ಷಿತ ಆದಾಯ: ಕಳೆದ ಮುಂಗಾರು ಹಂಗಾಮಿನಲ್ಲಿ ಎರಡು ಎಕರೆಯಲ್ಲಿ ಗಜ್ಜರಿ ಬೆಳೆಯನ್ನು ಬೆಳೆದಿದ್ದು ಉಸುಕು ಮಿಶ್ರಣ ಮೂಲಕ ಈ ಗಜ್ಜರಿ ಬೀಜವನ್ನು ಹಾಕಲಾಗಿತ್ತು. ಇದರಿಂದ ಬೀಜ ಬೇರೆ ಕಡೆ ಹಾರಿ ಹೋಗುವದಿಲ್ಲ ಎಂಬುದು ಸಹಜವಾದ ನಂಬಿಕೆಯಾಗಿದೆ. ಇದಕ್ಕೆ ಹನಿ ನೀರಾವರಿ ಮೂಲಕ ನೀರು ಹಾಯಿಸಲಾಗಿತ್ತು. ಬೀಜಕ್ಕಾಗಿ 15 ಸಾವಿರ ರೂ. ಖರ್ಚು ಮಾಡಿದ್ದರು. ಬಳ್ಳೊಳ್ಳಿ ಬೀಜಕ್ಕೆ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ತಲಾ ಎರಡೂ ಬೆಳೆಯಿಂದ ವಾರ್ಷಿಕವಾಗಿ 4 ಲಕ್ಷ ರೂ. ಆದಾಯ ಪಡೆದಿದ್ದಾರೆ.

ಶಾಂತಿ-ಸಮಾಧಾನದ ಕೆಲಸ
ಕೃಷಿ ಕೆಲಸದಲ್ಲಿ ಇರುವಷ್ಟು ಸಮಾಧಾನ, ಶಾಂತಿ ಮತ್ತು ಆದಾಯ ಬೇರೆ ಕ್ಷೇತ್ರದಾಗ ಇಲ್ಲರೀ. ಹಿಂಗಾಗಿ ಈಗ ನನ್ನ ಮೂಲ ಕಸಬು ರೈತಕೀನ ಆಗಿದೇರಿ. ಇದರಲ್ಲೇ ಕೈತುಂಬ ಆದಾಯ ಗಳಿಸುತ್ತಿರುವೆ’. ಭೂಮಿ ತಾಯಿನ್ನ ನಂಬಿ ಶ್ರಮ ಮಾಡಿ ಬೆಳೆದರ ಭೂತಾಯಿ ಫಲ ಕೊಡತಾಳ. ಹಿಂಗಾಗಿ ಪ್ರಕೃತಿಯ ಮಡಿಲಿನ್ಯಾಗ ಲಾಭದಾಯಕ ಜೀವನ ಸಾಗಿಸುವಂತಾಗೇತಿ. ಶಿಸ್ತುಬದ್ಧ ಕೃಷಿ ಮಾಡಿದರ ಕೃಷಿಯಲ್ಲಿ ನಂಬಿಕೆ ಇಟ್ಟಿರುವ ಯಾರಿಗೂ ನಷ್ಟ ಅನ್ನೂದ ಇಲ್ಲರೀ ಎನ್ನುತ್ತಾರೆ ರೈತ ಮಲ್ಲೇಶ ಗುಜನಾಳ.

*ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next