ನವದೆಹಲಿ: ಪ್ರಾದೇಶಿಕವಾಗಿ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ ಅಂದಾಜು 3,500 ಉದ್ಯೋಗಿಗಳನ್ನು ಕೈಬಿಡಲಾಗುವುದು ಎಂದು ಪ್ರಮುಖ ಶೈಕ್ಷಣಿಕ ಟೆಕ್ ಸಂಸ್ಥೆ ಬೈಜೂಸ್ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು
ಮೂಲವೊಂದರ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮ ಹೆಚ್ಚಿನ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ ಈಗ ಆನ್ ಲೈನ್ ಶಿಕ್ಷಣದ ಬೇಡಿಕೆ ಇಳಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ.
ಬೈಜೂಸ್ ನಲ್ಲಿ ಸದ್ಯ ಯಾವುದೇ ಹಿಂಬಡ್ತಿ ಇಲ್ಲ. ಆದರೆ ಕಂಪನಿಯ ವಿವಿಧ ಘಟಕಗಳಲ್ಲಿನ ಉದ್ಯೋಗಿಗಳ ಕಾರ್ಯಚಟುವಟಿಕೆಯ ಮೌಲ್ಯಮಾಪನ ನಡೆಯುತ್ತಿದೆ. ಅದರಲ್ಲಿ ಸುಮಾರು ಒಂದು ಸಾವಿರ ಉದ್ಯೋಗಿಗಳು ನೋಟಿಸ್ ಪೀರಿಯಡ್ ನಲ್ಲಿದ್ದಾರೆ. ಅದರಂತೆ 1,000 ಉದ್ಯೋಗಿಗಳು ಫರ್ಫಾಮೆನ್ಸ್ ಗುರಿ ತಲುಪಲು ವಿಫಲರಾಗಿದ್ದಾರೆ. ಒಟ್ಟಾರೆ ಪಿಂಕ್ ಸ್ಲಿಪ್ ಪ್ರಕ್ರಿಯೆಯಲ್ಲಿ ಸುಮಾರು 3,500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಸಕ್ತ ಸಾಲಿನ ಅಕ್ಟೋಬರ್ ಅಂತ್ಯದೊಳಗೆ ಬೈಜೂಸ್ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಕಂಪನಿಯ ವೆಚ್ಚ ಕಡಿತಗೊಳಿಸುವ ಹಾಗೂ ನಗದು ಪ್ರಕ್ರಿಯೆ ನಿರ್ವಹಣೆ ಸರಳಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಬೈಜೂಸ್ ನ ಭಾರತದ ಸಿಇಒ ಅರ್ಜುನ್ ಮೋಹನ್ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.