ಹೊಸದಿಲ್ಲಿ : ಉತ್ತರಪ್ರದೇಶದ ಮತ್ತು ಬಿಹಾರದಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಮತ ಏಣಿಕೆ ಕಾರ್ಯ ಬುಧವಾರ ನಡೆಯುತ್ತಿದ್ದು, ಆರಂಭಿಕ ಮುನ್ನಡೆ ಸಾಧಿಸಿದ್ದ ಯುಪಿಯ ಗೋರಖ್‌ಪುರ್ ಮತ್ತು ಫೂಲ್ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ವಿಪಕ್ಷ ಆರ್‌ಜೆಡಿ-ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಗೋರಖ್‌ಪುರ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಶವ್‌ಪ್ರಸಾದ್ ಮೌರ್ಯ ಅವರು ಡಿಸಿಎಂ ಆಗಿ ಆಯ್ಕೆಯಾದ ಬಳಿಕ ಫೂಲ್ಪುರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಿಹಾರದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು ಮತಗಳ ಏಣಿಕೆ ಪ್ರಗತಿಯಲ್ಲಿದ್ದು ಆಡಳಿತಾರೂಢ ಜೆಡಿಯು-ಬಿಜೆಪಿ ಮತ್ತು ವಿಪಕ್ಷ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಜೆಪಿ ಮುಖಂಡರಾದ ಕೌಶಲೇಂದ್ರ ಸಿಂಗ್ ಪಟೇಲ್ ಮತ್ತು ಉಪೇಂದ್ರ ದತ್ ಶುಕ್ಲಾ ಅವರು ಕ್ರಮವಾಗಿ ಫೂಲ್ಪುರ್ ಮತ್ತು ಗೋರಖ್‌ಪುರದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದರಾದರೂ ಮಧ್ಯಾಹ್ನದ ವರದಿಯಂತೆ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ. .
ಬಿಹಾರದ ಅರೆರಿಯಾ ಲೋಕಸಭಾ ಕ್ಷೇತ್ರ ಮತ್ತು ಜೆಹಾನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಮುನ್ನಡೆ ಸಾಧಿಸಿದ್ದು ,ಭಬುವಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.