ಮೈಸೂರು: ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಕೊಡುತ್ತಿಲ್ಲ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದರು.
ಸರ್ಕಾರದ ಅಜೆಂಡಾ ಬಯಲು: ನಾಡಗೀತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಸರ್ಕಾರದ ಅಜೆಂಡಾ ಏನು ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತದೆ. ಸರ್ಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು – ನುಡಿಗೆ ಸಿಎಂ ಧಕ್ಕೆ ತರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಸಿಎಂ ಬರದ ಸ್ಥಿತಿ ಇಲ್ಲ ಎಂಬ ಭ್ರಮೆಯಲ್ಲಿ ಇದ್ದಾರೆ. ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ. ಆತಂಕದಲ್ಲೇ ದೆಹಲಿ ಚಲೋ ನಾಟಕ ಮಾಡಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದರು.
ಇದನ್ನೂ ಓದಿ:Pakistan Cricket; ಬಾಬರ್ ಅಜಂ- ಮಿಕ್ಕಿ ಆರ್ಥರ್ ವಿರುದ್ಧ ಆರೋಪಗಳ ಸುರಿಮಳೆಗೈದ ಹಫೀಜ್
ಕುಮಾರಸ್ವಾಮಿ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಕೆಲವರನ್ನು ಕಾಂಗ್ರೆಸ್ ಗೆ ಸೆಳೆಯುವ ವಿಚಾರವೂ ನನಗೆ ಗೊತ್ತಿಲ್ಲ. ಊಹಾಪೋಹಕ್ಕೆ ಉತ್ತರ ಕೊಡುವುದಿಲ್ಲ ಎಂದರು.
ಧಾರ್ಮಿಕ ಕಾರ್ಯದಲ್ಲಿ ಭಾಗಿ: ಮೈಸೂರು ತಾಲೂಕಿನ ಹಂಚ್ಯಾ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ, ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಮ್ಮ ದೇವಾಲಯದ ಲೋಕಾರ್ಪಣೆ, ಬ್ರಹ್ಮಕಳಶೋತ್ಸವ, ಅಂಕ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗಿಯಾದರು. ಪೂಜಾ ಕೈಂಕರ್ಯಗಳಲ್ಲಿ ವಿಜಯೇಂದ್ರ ಪತ್ನಿ ಪ್ರೇಮ ಕೂಡ ಭಾಗವಹಿಸಿದ್ದು, ಸಂಕಲ್ಪ ಪೂಜೆ ನೆರವೇರಿಸುವ ಮೂಲಕ ದಂಪತಿಗಳು ದೇಗುಲವನ್ನು ಲೋಕಾರ್ಪಣೆ ಮಾಡಿದರು.