Advertisement
ವಿಧಾನಸಭೆ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದರೂ, ಆ ನಾಯಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ತೀರ್ಪೆ ಅಂತಿಮ ಎನ್ನುವುದು ಈ ಚುನಾವಣೆ ಫಲಿತಾಂಶದಿಂದ ಹೊರಹೊಮ್ಮಲಿದೆ.
Related Articles
Advertisement
ಅದೇ ರೀತಿ ಕಾಂಗ್ರೆಸ್‌ನಲ್ಲಿಯೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರ ವಿರೋಧ ಕಟ್ಟಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರನ್ನು ಗೆಲ್ಲಿಸಿಕೊಂಡು ಬರಲು ಕಾಲಿಗೆ ಚಕ್ರ ಕಟ್ಟಿಕೊಂಡು ಏಕಾಂಗಿಯಾಗಿ ತಿರುಗಾಡಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ತೊರೆದು ಹೋಗಿರುವ ಅನರ್ಹ ಶಾಸಕರನ್ನು ಸೋಲಿಸುವುದಷ್ಟೇ ಅವರ ಹೋರಾಟವಾಗಿಲ್ಲ. ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವೂ ಅವರ ಉದ್ದೇಶವಾಗಿದೆ. ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರಗಳಿಂದ ಬೇಸರವಾಗಿದ್ದರೂ, ಚುನಾವಣೆ ಫಲಿತಾಂಶ ಬರದೇ ಏನೂ ಮಾಡಲಾಗದ ಸ್ಥಿತಿಯಲ್ಲಿ ಮೂಲ ಕಾಂಗ್ರೆಸ್ ನಾಯಕರು ಇದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸು ಕಳೆಗುಂದಿಸುವ ಅಥವಾ ಪ್ರಜ್ವಲಿಸುವ ಸೂಚನೆಯನ್ನು ಈ ಚುನಾವಣಾ ಫಲಿತಾಂಶ ನೀಡಲಿದೆ.
ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನಾಂತರ ದ್ವೇಷ ಮತ್ತು ಪ್ರೀತಿಯನ್ನು ಉಳಿಸಿಕೊಂಡು ಪಕ್ಷವನ್ನು ಜೀವಂತವಾಗಿಡುವ ಕಸರತ್ತು ನಡೆಸುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಬದ್ಧತೆಯನ್ನು ಈ ಫಲಿತಾಂಶ ಎತ್ತಿ ತೋರಿಸುವ ಸಾಧ್ಯತೆ ಇದೆ. ದೇವೇಗೌಡರು ಕಾಂಗ್ರೆಸ್‌ನತ್ತ, ಕುಮಾರಸ್ವಾಮಿಯವರು ಬಿಜೆಪಿಯತ್ತ ಒಲವು ವ್ಯಕ್ತಪಡಿಸುವಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮ್ಮ ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿದೆ.
ಏಕೆಂದರೆ, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾದರೆ, ಕುಮಾರಸ್ವಾಮಿ ನಡೆ ಮೇಲೆ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಕುಮಾರಸ್ವಾಮಿ ತಮ್ಮ ನಿರ್ಧಾರದ ಮೂಲಕ ಉತ್ತರಿಸಬೇಕಾಗುತ್ತದೆ. ಅವರು ಯಾವ ಹೆಜ್ಜೆ ಇಡುತ್ತಾರೆ ಎನ್ನುವುದು ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವದ ನಿರ್ಧಾರವನ್ನು ಪ್ರತಿಫಲಿಸುತ್ತದೆ.