Advertisement

ಉಪಚುನಾವಣೆ: ಶಾಂತಿಯುತ ಮತದಾನ

09:38 PM Nov 12, 2019 | Team Udayavani |

ಚಾಮರಾಜನಗರ: ಜಿಲ್ಲೆಯ ತಲಾ ಒಂದು ಜಿಪಂ ಕ್ಷೇತ್ರ, ತಾಪಂ ಕ್ಷೇತ್ರ, ನಗರಸಭಾ ವಾರ್ಡ್‌ ಹಾಗೂ ನಾಲ್ಕು ಗ್ರಾಪಂ ಕ್ಷೇತ್ರಗಳಿಗೆ ಮಂಗಳವಾರ ಶಾಂತಿಯುತ ಚುನಾವಣೆ ನಡೆಯಿತು. ಹರದನಹಳ್ಳಿ ಜಿಪಂ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮತದಾನ ನಡೆಯಿತು. ಯಳಂದೂರು ತಾಲೂಕಿನ ಯರಿಯೂರು ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಶೇ. 62.60ರಷ್ಟು ಮತದಾನವಾಯಿತು. ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್‌ನಲ್ಲಿ ಶೇ. 71.41ರಷ್ಟು ಮತದಾನ ನಡೆಯಿತು.

Advertisement

ಕೊಳ್ಳೇಗಾಲ ತಾಲೂಕಿನ ಬಾಣೂರು ಗ್ರಾಪಂ ಕ್ಷೇತ್ರದಲ್ಲಿ ಶೇ.58.87 ರಷ್ಟು, ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಪಂ ಕ್ಷೇತ್ರದಲ್ಲಿ ಶೇ.69.55 ರಷ್ಟು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಗ್ರಾಪಂನಲ್ಲಿ ಶೇ. 79.71 ರಷ್ಟು ಮತ್ತು ಹಸಗೂಲಿ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಶೇ.73.10 ರಷ್ಟು ಮತದಾನ ನಡೆಯಿತು.

ಮಧ್ಯಾಹ್ನದ ನಂತರ ಬಿರುಸು: ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್‌ ಹೊರತುಪಡಿಸಿದರೆ ಉಳಿದ ಎಲ್ಲ ಕ್ಷೇತ್ರಗಳ ಚುನಾವಣೆಯು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಿತು. ಕೃಷಿ ಕೂಲಿ ಕಾರ್ಮಿಕರು ಕೆಲಸಗಳಿಗೆ ತೆರಳಿದ್ದರಿಂದ ಮಧ್ಯಾಹ್ನದ ತನಕ ಮತದಾನ ವಿಳಂಬವಾಗಿತ್ತು. ನಂತರ ಬಿರುಸುಗೊಂಡಿತು.

ಲೋಪದೋಷಗಳಿಲ್ಲದೆ ಮತದಾನ: ಹರದನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 38, ಯರಿಯೂರು ತಾಪಂ ಕ್ಷೇತ್ರದಲ್ಲಿ 7, ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್‌ನಲ್ಲಿ 1 ಮತಗಟ್ಟೆ ತೆರೆಯಲಾಗಿತ್ತು. ಇಲ್ಲೆಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದರೆ, ಗ್ರಾಪಂ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತ ಪತ್ರ ಬಳಸಲಾಯಿತು. ಯಾವುದೇ ಲೋಪದೋಷಗಳಿಲ್ಲದೆ ಮತದಾನ ಮುಕ್ತಾಯಗೊಂಡಿತು.

ಮತದಾರರಲ್ಲಿ ಮನವಿ: ಮತಗಟ್ಟೆಯ ಬಳಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದು, ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದುದು ಕಂಡುಬಂದಿತು. ಅಲ್ಲದೆ ಮತದಾರರ ಪಟ್ಟಿಯಲ್ಲಿರುವ ಮತದಾರರ ಕ್ರಮ ಸಂಖ್ಯೆಯನ್ನು ತಿಳಿಸಿ ಮತಗಟ್ಟೆಗೆ ಕಳುಹಿಸಲಾಗುತ್ತಿತ್ತು.

Advertisement

ವಯಸ್ಸಾದವರು, ಅಶಕ್ತರು, ವಿಕಲಚೇತರು ಸಂಬಂಧಿಕರ ಸಹಾಯದೊಡನೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಪಕ್ಷಗಳ ಮುಖಂಡರು ತೋಟದ ಮನೆಗಳಲಿದ್ದ ಮತದಾರರನ್ನು ಬೈಕ್‌ಗಳಲ್ಲಿ ಕರೆತಂದು ಮತ ಹಾಕಿಸಿದರು.

ಬುಡಕಟ್ಟು ಸೋಲಿಗರಿಂದ ಮತದಾನ: ಹರದನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯಕ್ಕೆ ಸೇರಿದ ಕೂಡೂರು, ಕೆ.ಗುಡಿ, ಬೇಡಗುಳಿ ಕಾಲೋನಿ, ಮುನೇಶ್ವರ ಕಾಲೋನಿ, ಕೋಳಿಪಾಳ್ಯ, ಮೂಕನಪಾಳ್ಯ, ವೀರಯ್ಯನಪುರ, ಬೂದಿಪಡಗ, ಮೂಡಹಳ್ಳಿ, ಮಾರಿಗುಡಿ ಪೋಡು, ಬಂಗ್ಲೆ ಪೋಡು, ಬಿಸಿಲಗೆರೆ, ಕನ್ನೇರಿ ಕಾಲನಿ, ಬೂತಾಣಿ ಪೋಡು, ಕಾಡಿಗೆರೆಗಳಲ್ಲಿ ಬುಡಕಟ್ಟು ಸೋಲಿಗ ಸಮುದಾಯದವರು ಮತ ಚಲಾಯಿಸಿದರು.

ಮತದಾನ ಮಾಡಲು ಮನವಿ: ಏಕೈಕ ಕ್ಷೇತ್ರವಾದ್ದರಿಂದ ಪಕ್ಷಗಳ ಮುಖಂಡರು ಕಾರ್ಯಕರ್ತರು ಮತದಾರರನ್ನು ಹುಡುಕಿ ಹುಡುಕಿ ಮನವಿ ಮಾಡಿ ಮತ ಹಾಕಿಸುತ್ತಿದ್ದರು. ಹಾಗಾಗಿ ಬಿರುಸಿನ ಮತದಾನ ಕಂಡು ಬಂದಿತು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ತೆರಳುವ ಮುನ್ನ ಮತ ಹಾಕಿ ತೆರಳುತ್ತಿದ್ದುದು ಕಂಡು ಬಂದಿತು.

ಮತದಾರರ ಮನವೊಲಿಕೆಗೆ ಯತ್ನ: ಹರದನಹಳ್ಳಿ ಜಿಪಂ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಬಸವಾಪುರದವರಾಗಿದ್ದು, ಇಬ್ಬರೂ ಸ್ವಗ್ರಾಮದ ಮತಗಟ್ಟೆ ಬಳಿ ಖದ್ದಾಗಿ ನಿಂತು ಕೊನೆ ಪ್ರಯತ್ನವಾಗಿ ಮತದಾರರ ಮನವೊಲಿಸುತ್ತಿದ್ದು ಕಂಡುಬಂತು.

ಬಿಗಿ ಪೊಲೀಸ್‌ ಬಂದೋಬಸ್ತ್: ಮತದಾನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌ ಅವರು ಹರದನಹಳ್ಳಿ, ದೊಡ್ಡ ಮೋಳೆ, ಚಿಕ್ಕಮೋಳೆ, ಬ್ಯಾಡಮೂಡ್ಲು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಮತದಾನ ನಡೆದ ಗ್ರಾಮಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next