ಬೆಂಗಳೂರು: ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ.
ಬಸವ ಕಲ್ಯಾಣಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರವಿಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸ ಲಾಗಿದೆ. ಈಗಾಗಲೇ ಈ ಸಮಿತಿ ನಾಯಕರು ಎರಡೂ ಕ್ಷೇತ್ರಗಳ ಮುಖಂಡರ ಜತೆ ಎರಡು ಹಂತದ ಸಭೆ ನಡೆಸಿದ್ದಾರೆ.
ಮಸ್ಕಿಯಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರೇ ಅಭ್ಯರ್ಥಿಯಾಗುವುದರಿಂದ ಬಿಜೆಪಿ ಅಲ್ಲಿ ಮೊದಲಿನಿಂದಲೇ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಅರಂಭಿಸಿದೆ. ಈ ಕ್ಷೇತ್ರದ ಉಸ್ತುವಾರಿಯನ್ನು ಬಿ.ವೈ. ವಿಜ ಯೇಂದ್ರ ಅವರೇ ತೆಗೆದುಕೊಳ್ಳಬೇಕೆಂದು ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಕೇಳಿಕೊಂಡು ಅವರನ್ನು ಉಸ್ತು ವಾರಿ ಯಾಗಿ ಹಾಕಿಸಿಕೊಂಡಿದ್ದು, ಗೆಲುವಿನ ವಿಶ್ವಾಸದಲ್ಲಿ ದ್ದಾರೆ. ಬಸವ ಕಲ್ಯಾಣದಲ್ಲಿ 18 ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಈಗಾಗಲೇ ಅವರೆಲ್ಲರೊಂದಿಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆ ನಡೆಸಿ, ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಪಕ್ಷದ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಅನುಭವ ಮಂಟಪ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಮರಾಠ ಸಮುದಾಯಕ್ಕೆ ಮರಾಠ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದು, ಬಿಜೆಪಿಗೆ ಅನುಕೂಲವಾಗುತ್ತದೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೂ ಅನೇಕ ಜನ ಆಕಾಂಕ್ಷಿಗಳಿದ್ದು, ದಿ.ಸುರೇಶ್ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದೆ. ಹಾಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿ ಮಠ, ಸೇರಿದಂತೆ ಎಂಟಕ್ಕೂ ಹೆಚ್ಚು ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಬಹುತೇಕ ಮಹಾಂತೇಶ ಕವಟಗಿ ಮಠ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಲ್ಲಿಯೇ ಬೃಹತ್ ಸಮಾವೇಶ ನಡೆಸಿದ್ದು, ಈ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಗಳಾದರೂ ಗೆದ್ದು ಬರುವ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ಮರಾಠ ಸಮುದಾಯ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ನಿಗಮ ರಚನೆ ಮಾಡಿರುವುದು ರಾಜ್ಯ ಸರ್ಕಾರಕ್ಕೆ ಅನುಕೂಲ ವಾಗುತ್ತದೆ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.
ಈಗಾಗಲೇ ಬಸವ ಕಲ್ಯಾಣ ಮತ್ತು ಮಸ್ಕಿ ನಲ್ಲಿ ಎರಡು ಸಭೆಗಳನ್ನು ಮಾಡಲಾಗಿದೆ. ರಾಜ್ಯಾಧ್ಯಕ್ಷರು ಬಸವ ಕಲ್ಯಾಣಕ್ಕೆ ಎರಡು ಬಾರಿ ಹೋಗಿ ಬಂದಿದ್ದಾರೆ. ಬೆಳಗಾವಿಗೆ ಅಮಿತ್ ಶಾ ಭೇಟಿ ನೀಡಿ ದೊಡ್ಡ ಮಟ್ಟದ ಸಮಾವೇಶ ನಡೆಸಿದ್ದಾರೆ. ವಿರೋಧ ಪಕ್ಷಗಳ ಕಾರ್ಯತಂತ್ರ ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ, ಮಾಡುತ್ತೇವೆ.
● ಕ್ಯಾ. ಗಣೇಶ್ ಕಾರ್ಣಿಕ್, ರಾಜ್ಯ ಬಿಜೆಪಿ ಮುಖ್ಯ ವಕ್ತಾರ
– ಶಂಕರ ಪಾಗೋಜಿ