Advertisement

ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

02:23 PM Oct 17, 2021 | Team Udayavani |

ಹಾವೇರಿ: ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ. ಇದು ಹಾನಗಲ್ ತಾಲ್ಲೂಕಿನ ಅಭಿವೃದ್ದಿಯ ಭವಿಷ್ಯದ ಪ್ರಶ್ನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಹಾವೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯಾವುದೇ ಚುನಾವಣೆ ಭವಿಷ್ಯದ ದಿಕ್ಸೂಚಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಗೆದ್ದರು, ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿದ್ದರು. ಹೀಗಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ರಾಜ್ಯ ತೀರ್ಮಾನಿಸುತ್ತದೆ ಎಂದರು.

ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಅತಿ ಹೆಚ್ಚು ಅಂತರದಿಂದ  ಗೆಲ್ಲಲಿದ್ದಾರೆ. ಹಾನಗಲ್ ತಾಲ್ಲೂಕಿನ ರಾಜಕಾರಣ ವಿಭಿನ್ನ.  ಇಬ್ಬರು ವ್ಯಕ್ತಿತ್ವಗಳ ಮೇಲೆ ಕೇಂದ್ರಿತವಾದ ಮೂರು ದಶಕಗಳ ರಾಜಕಾರಣವನ್ನು ಹಾನಗಲ್ ಕಂಡಿದೆ, ಸನ್ಮಾನ್ಯ ಸಿ.ಎಂ. ಉದಾಸಿಯವರು ತೀರಿಕೊಂಡ ಮೇಲೆ, ಮನೋಹರ್ ತಹಶೀಲ್ದಾರ್ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮೊದಲನೇ ಬಾರಿಗೆ ಉದಾಸಿ ಮತ್ತು ಮನೋಹರ್ ತಹಶೀಲ್ದಾರ್ ರಹಿತವಾದ ಚುನಾವಣೆ ನಡೆಯುತ್ತಿದೆ ಎಂದರು.

ಉದಾಸಿಯವರು ತಮ್ಮ ಜೊತೆಗೆ ಪಕ್ಷವನ್ನು ಕಟ್ಟಿದರು. ವೈಯಕ್ತಿಕವಾಗಿ ಎಲ್ಲರೊಂದಿಗೆ ಸಂಪರ್ಕ ಹೊಂದಿದ್ದರು. ಅವರು ಜನರ ಕಾರ್ಯಕ್ಕೆ ಸ್ಪಂದಿಸುವ ರೀತಿಯಲ್ಲಿ ಇನ್ಯಾರೂ ಸ್ಪಂದಿಸಿಲ್ಲ. ಹಾನಗಲ್ ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ, ಅದಕ್ಕೆ ಉದಾಸಿಯವರ ಕೊಡುಗೆ ಬಹಳ ಇದೆ ಎಂದು ಅಭಿಪ್ರಾಯಪಟ್ಟರು.

Advertisement

ರಸ್ತೆ, ಕರೆಕಟ್ಟೆ ಮುಂತಾದ ಮೂಲಭೂತ ಸೌಕರ್ಯಗಳು ಸೇರಿದಂತೆ, ಐ.ಟಿ.ಐ, ಡಿಪ್ಲೊಮಾ ಕಾಲೇಜುಗಳನ್ನು ಹಾನಗಲ್ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಉದಾಸಿಯವರ ಜನಪರ ಹೋರಾಟದಿಂದ ರೈತರಿಗೆ ವಿಮೆಯನ್ನು ಪರಿಚಯಿಸಿದರು. ನಿರಂತರವಾಗಿ ಎರಡು ದಶಕಗಳ ಕಾಲ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಯಾರೂ ಏನೇ ಹೇಳಿದರೂ, ತಳಮಟ್ಟದಲ್ಲಿ ರೈತರ ಜೊತೆಗೆ, ಜನಸಾಮಾನ್ಯರ ಜೊತೆಗೆ ನಮ್ಮ ಪಕ್ಷದ ನಿಕಟ ಸಂಪರ್ಕ ಹಾಗೂ ಸಂಬಂಧ ಚುನಾವಣೆ ಪ್ರಚಾರಕ್ಕೆ ಹಾಗೂ ಚುನಾವಣೆಯ ಗೆಲುವಿಗೆ ಬಹಳ ದೊಡ್ಡ ಶಕ್ತಿಯಾಗಲಿದೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು, ತುಂಗಭದ್ರಾ ಮೇಲ್ದಂಡೆ ಯೋಜನೆಯಾಗಿದ್ದು ಅವರ ಉದಾಸಿಯವರ ಕಾಲದಲ್ಲಿಯೇ. ಜಮೀನುಗಳಿಗೆ ಕಾಂಗ್ರೆಸ್ ನವರು ನೀರು ಕೊಡಲಿಲ್ಲ. ಹಾನಗಲ್, ಹಿರೇಕೆರೂರು, ಬ್ಯಾಡಗಿಯಲ್ಲಿ ತುಂಗಾಭದ್ರಾ ಯೋಜನೆ ಅನುಷ್ಠಾನದಲ್ಲಿದೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ ಎಂದರು.

ಇಂಜಿನಿಯರಿಂಗ್ ಕಾಲೇಜು ಆಗಲಿ, ಅಥವಾ ಇನ್ಯಾವುದೇ ಅಭಿವೃದ್ಧಿಯಾಗಿರುವುದೇ ನಮ್ಮ ಕಾಲದಲ್ಲಿ. ಜನ ಈ ಬಾರಿ ಬೆಂಬಲ ನೀಡಲಿದ್ದಾರೆ, ಸಮಗ್ರ ಅಭಿವೃದ್ಧಿಗೆ ನಮ್ಮ ಬದ್ಧತೆಯ ಬಗ್ಗೆ ಜನರಿಗೆ ಗೊತ್ತಿದೆ ಎಂದರು.

ಆರ್.ಎಸ್.ಎಸ್ ಕಾರ್ಯಕರ್ತರು ವಿಶ್ವವಿದ್ಯಾನಿಲಯಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿ ಹಣ ದೋಚುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು,  ಯಾರನ್ನು ಮೆಚ್ಚಿಸಲು ಅವರು ಈ ಮಾತುಗಳನ್ನು ಆಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರ ನಡುವೆ ಆರ್.ಎಸ್.ಎಸ್ ಬೈಯ್ಯಲು ಸ್ಪರ್ಧೆ ಇದೆ. ಅಲ್ಪಸಂಖ್ಯಾತರನ್ನು ಓಲೈಸಲು ಇಬ್ಬರೂ ಸ್ಪರ್ಧಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ:ಹಲವು ಯೋಜನೆಗಳ ಉದ್ಘಾಟಣೆಗಾಗಿ ಕೇದಾರನಾಥಕ್ಕೆ ಪ್ರಧಾನ ಮಂತ್ರಿಗಳ ಭೇಟಿ

ಚುನಾವಣೆಗೂ ಮುನ್ನ ಹಾನಗಲ್ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಲಿದ್ದೇವೆ ಎಂದರು.

ಬಾಳಂಬೀಡ ಹಾಗೂ ಏತ ನೀರಾವರಿ ಯೋಜನೆಗಳು ಕಾಲದಲ್ಲಿ ಆಗಿದ್ದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ಈ ಬಗ್ಗೆ ದಾಖಲೆ ಸಮೇತ ನೋಡಬೇಕು. ಯಾರ ಕಾಲದಲ್ಲಿ ಡಿ.ಪಿ.ಆರ್ ಆಗಿದೆ, ಆಡಳಿತಾತ್ಮಕ ಮಂಜೂರಾತಿ ದೊರತಿದೆ, ಅನುದಾನ ಬಿಡುಗಡೆಯಾಗಿದೆ ಎನ್ನುವುದನ್ನು ಪರಿಶೀಲಿಸಬೇಕು ಎಂದರು.

ಇವೆಲ್ಲವೂ ಬಿಜೆಪಿ ಕಾಲದಲ್ಲಿಯೇ ಆಗಿದೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಸ್ಪಷ್ಟಪಡಿಸಿದರು. ಮತ್ತೊಂದು ಕೆರೆ ತುಂಬಿಸಿದ ಯೋಜನೆ ಮಂಜೂರು ಮಾಡಿ ಎಂಬ ಮನವಿಯನ್ನು ಹೊತ್ತು ಕಾಂಗ್ರೆಸ್ಸಿಗರೇ ನನ್ನ ಬಳಿ ಬಂದಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next