Advertisement

By Election: ಸಿ.ಪಿ. ಯೋಗೇಶ್ವರ್‌ ಮೈತ್ರಿ ಅಭ್ಯರ್ಥಿಯೋ? ಬಂಡಾಯವೋ? ಕಾಂಗ್ರೆಸ್ಸಿಗೋ?

03:41 AM Oct 22, 2024 | Esha Prasanna |

ಬೆಂಗಳೂರು: ನಿರೀಕ್ಷೆಯಂತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಖಾಡಕ್ಕೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಧುಮುಕಿದ್ದು, ಅಧಿಕೃತವಾಗಿ ಸ್ಪರ್ಧೆ ನಿಶ್ಚಿತ ಎಂದು ಘೋಷಿಸಿದ್ದಾರೆ. ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಇನ್ನೂ ಉಳಿಸಿಕೊಂಡಿರುವ ಅವರು ಮೈತ್ರಿ ಪಡೆಗೆ “ಅಂತಿಮ ನಿರ್ಣಯ’ ತೆಗೆದುಕೊಳ್ಳುವುದಕ್ಕೆ ತುಸು ಸಮಯವನ್ನಷ್ಟೇ ಉಳಿಸಿದ್ದಾರೆ.

Advertisement

ಇದುವರೆಗೆ ತಾವು ನುಂಗಿಕೊಂಡಿದ್ದ ಅಸಮಾಧಾನಗಳನ್ನೆಲ್ಲ ಬೆಂಗಳೂರಿನಲ್ಲಿ ಹೊರ ಹಾಕಿ ಹುಬ್ಬಳ್ಳಿಗೆ ಬಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರ ನಿವಾಸಕ್ಕೆ ತೆರಳಿ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ಬಳಿಕ ತಾವು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿ ದರು. ಆದರೆ ಅವರ ಸ್ಪರ್ಧೆ ಹೇಗೆ- ಬಿಜೆಪಿ ಯಿಂದಲೋ ಮೈತ್ರಿ ಪಕ್ಷದಿಂದಲೋ ಪಕ್ಷೇತರ ವಾಗಿಯೋ ಅಥವಾ ಕಾಂಗ್ರೆಸ್‌ನಿಂದಲೋ ಎಂಬ ಕುತೂಹಲ ಮಾತ್ರ ಇನ್ನೂ ಉಳಿದುಕೊಂಡಿದೆ.

ಜೋಶಿ ಮನವಿ!
ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ಕರೆ ಮಾಡಿರುವ ಯೋಗೇಶ್ವರ್‌ ತಾವೇಕೆ ಈ ನಿರ್ಣಯ ತೆಗೆದುಕೊಳ್ಳಬೇಕಾಯಿತು ಎಂಬುದನ್ನು ವಿವರಿಸಿ ದ್ದಾರೆ. ಜೋಶಿ ಅವರು ಎಚ್‌.ಡಿ. ಕುಮಾರಸ್ವಾಮಿಗೆ ಕರೆ ಮಾಡಿ ಪರಿಸ್ಥಿತಿಯ ಕುರಿತಂತೆ ಮಾತುಕತೆ ನಡೆಸಿದ್ದು, ಯೋಗೇಶ್ವರ್‌ ಅವರಿಗೆ ಟಿಕೆಟ್‌ ಬಿಟ್ಟುಕೊಡಲು ವಿನಂತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಮಿತ್‌ ಶಾ ಬಳಿಯೂ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾವಿಸಲು ಜೋಶಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜತೆಗೆ ತಾವು ಕರೆ ಮಾಡುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳ ಬೇಡಿ ಎಂದು ಯೋಗೇಶ್ವರ್‌ಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.ಹೀಗಾಗಿ ಪ್ರಹ್ಲಾದ್‌ ಜೋಷಿ ಕಡೆಯಿಂದ ಬರುವ ಸಂದೇಶವನ್ನು ಆಧರಿಸಿ ಯೋಗೇಶ್ವರ್‌ ತಮ್ಮ ಮುಂದಿನ ರಾಜಕೀಯ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಅವರ ಸ್ಪರ್ಧೆಯ ಸ್ವರೂಪ ಹೇಗಿರಲಿದೆ ಎಂಬುದು ಇತ್ಯರ್ಥವಾಗುವ ಸಾಧ್ಯತೆ ಇದೆ.

ಮೂರರಲ್ಲಿ ಯಾವುದು?
ಯೋಗೇಶ್ವರ್‌ ಜೆಡಿಎಸ್‌ ಚಿಹ್ನೆಯ ಮೇಲೆ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಈಗ ಮುಗಿದ ಅಧ್ಯಾಯ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಕ್ಕೆ ಯೋಗೇಶ್ವರ ಕೊನೆಯ ಹಂತದವರೆಗೆ ಪ್ರಯತ್ನ ನಡೆಸಲಿದ್ದಾರೆ. ಅದು ಸಾಧ್ಯವಾಗದೆ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವುದು ಶತಃಸಿದ್ಧ ಎನ್ನಲಾಗಿದೆ.

Advertisement

ಕಾಂಗ್ರೆಸ್‌ ಸೇರ್ಪಡೆ: ಅಂತಿಮ ಆಯ್ಕೆ
ಯೋಗೇಶ್ವರ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಆಯ್ಕೆಯನ್ನು ಅವರಿನ್ನೂ ಮುಕ್ತವಾಗಿರಿಸಿಕೊಂಡಿ ದ್ದಾರೆ. ತಮಗೆ ಕಾಂಗ್ರೆಸ್‌ ಆಹ್ವಾನ ಇದೆಯೋ, ಇಲ್ಲವೋ ಎಂಬುದನ್ನೂ ಗುಟ್ಟಾಗಿ ಇರಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಜೆಡಿಎಸ್‌ ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಿದ ಬಳಿಕವೇ ಯೋಗೇಶ್ವರ್‌ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಅದು ಸ್ವತಂತ್ರವೋ, ಯಾವುದೇ ಪಕ್ಷದಿಂದಲೋ ಎಂಬುದು ನಿರ್ಧಾರವಾಗಿಲ್ಲ. ಕಾಂಗ್ರೆಸ್‌ ಪಕ್ಷದವರು ಇದುವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಮಂಗಳವಾರ ಏನಾಗುತ್ತದೆಯೋ ಗೊತ್ತಿಲ್ಲ. ನನಗೇ ಬಿಜೆಪಿ ಟಿಕೆಟ್‌ ದೊರೆಯುವ ವಿಶ್ವಾಸವಿದೆ. -ಸಿ.ಪಿ. ಯೋಗೇಶ್ವರ್‌

ಸಾಧ್ಯಾಸಾಧ್ಯತೆಗಳು

1. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ. ಆದರೆ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು

2. ಇದಾಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ. ಆದರೆ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧೆ ಇಲ್ಲವೇ ಇಲ್ಲ

3. ಪರಿಸ್ಥಿತಿಯೇನಾದರೂ ಬದಲಾದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆಗಳೂ ಇವೆ

Advertisement

Udayavani is now on Telegram. Click here to join our channel and stay updated with the latest news.

Next