ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ. 50ಕ್ಕೂ ಹೆಚ್ಚು ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಪ್ರಚಂಡ ಗೆಲವು ಸಾಧಿಸಿದರೆ, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಪಡೆದಿದ್ದ ಮತಗಳಿಗಿಂತ 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 1.25 ಲಕ್ಷ ಮತಗಳನ್ನು ಪಡೆದು ದಾಖಲೆಯ ವಿಜಯ ಸಾಧಿಸಿದರೆ, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ| ರಾಜೇಶ ಗೌಡ 74 ಸಾವಿರ ಮತಗಳನ್ನು ಪಡೆದು ಜಯ ದಾಖಲಿಸಿ¨ªಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದೆ. ಆರ್.ಆರ್. ನಗರದಲ್ಲಿ ಒಟ್ಟು 2.09 ಲಕ್ಷ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ 1.25 ಲಕ್ಷ ಮತಗಳನ್ನು ಪಡೆದಿದ್ದರೆ, ಶಿರಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು 1.79 ಲಕ್ಷ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ 74,522 ಮತಗಳನ್ನು ಪಡೆದಿದ್ದಾರೆ.
ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ 67 ಸಾವಿರ ಮತಗಳನ್ನು ಪಡೆದಿದ್ದು, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದ ಮತಗಳಿಗಿಂತ 40 ಸಾವಿರ ಮತಗಳನ್ನು ಕಡಿಮೆ ಪಡೆದಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುನಿರತ್ನ 1.08 ಲಕ್ಷ ಮತಗಳನ್ನು ಪಡೆದಿದ್ದರು. ಕಳೆದ ಬಾರಿ 60 ಸಾವಿರ ಮತಗಳನ್ನು ಪಡೆದಿದ್ದ ಜೆಡಿಎಸ್ ಅಭ್ಯರ್ಥಿ ಈ ಬಾರಿ ಕೇವಲ 10 ಸಾವಿರ ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ 82 ಸಾವಿರ ಮತಗಳನ್ನು ಪಡೆದಿದ್ದರು.
ಶಿರಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೇವಲ 16 ಸಾವಿರ ಮತಗಳನ್ನು (ಶೇ. 9) ಪಡೆದಿದ್ದ ಬಿಜೆಪಿ ಉಪಚುನಾವಣೆಯಲ್ಲಿ 74 ಸಾವಿರ ಮತಗಳನ್ನು ಪಡೆದಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರಿಗೆ 63 ಸಾವಿರ ಮತಗಳು ಸಿಕ್ಕಿದ್ದರೆ, ಉಪ ಚುನಾವಣೆಯಲ್ಲಿ 61 ಸಾವಿರ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ 74 ಸಾವಿರ ಮತಗಳನ್ನು ಪಡೆದು ಗೆದ್ದಿದ್ದರೆ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರ ಪತ್ನಿ ಅಮ್ಮಾಜಮ್ಮ 35 ಸಾವಿರ ಮತಗಳನ್ನು ಪಡೆದಿದ್ದು ಕಳೆದ ಬಾರಿಗಿಂತ 40 ಸಾವಿರ ಕಡಿಮೆ ಮತಗಳು ಬಂದಿವೆ.
ಕಳೆದ ಬಾರಿ ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ಬಿಜೆಪಿ ಅಭ್ಯರ್ಥಿಗಿಂತ 25,492 ಇದ್ದರೆ, ಈ ಬಾರಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 58 ಸಾವಿರ ಇದೆ. ಶಿರಾ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಅಂತರ 10 ಸಾವಿರ ಇದ್ದರೆ, ಈ ಬಾರಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 13 ಸಾವಿರ ಇದೆ. ಉಳಿದಂತೆ ಇತರ ಪಕ್ಷಗಳು ಹಾಗೂ ಪಕ್ಷೇತರರ ನಗಣ್ಯ ಸಾಧನೆ ಎರಡೂ ಕ್ಷೇತ್ರಗಳಲ್ಲಿ ಯಥಾ ರೀತಿಯಲ್ಲಿದೆ.