ಕೊಳ್ಳೇಗಾಲ: ನ.12ರಂದು ಪಟ್ಟಣದ 19ನೇ ವಾರ್ಡಿನ ನಗರಸಭೆಯ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪದ್ಮಾ ವೀರಣ್ಣ ಬುಧವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ 19ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸುಧಾ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸಿ, ಪ್ರಕಟಣೆ ಹೊರಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪದ್ಮಾ ವೀರಣ್ಣ ನಾಮಪತ್ರವನ್ನು ಸಲ್ಲಿಸಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ನೇತೃತ್ವ: ಪಟ್ಟಣದ ಡಾ.ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ವಿನಾಯಕ ದೇವಾಲಯದಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ತಾಲೂಕು ಕಚೇರಿಯ ಆವರಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಚುನಾವಣಾಧಿಕಾರಿ ಹೊನ್ನೇಗೌಡ ಅವರಿಗೆ ಸಲ್ಲಿಸಿದರು.
ನೂರಕ್ಕೆ ನೂರು ಗೆಲುವು ಖಚಿತ: ನಾಮಪತ್ರ ಸಲ್ಲಿಸಿದ ಬಳಿಕ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಪಕ್ಷದಲ್ಲಿ ಒಡಕು ಉಂಟಾಗಿ ಮೂರು ಬಣಗಳಾಗಿತ್ತು. ಈಗ ಎಲ್ಲಾ ಮೂರು ಬಣಗಳನ್ನು ಒಟ್ಟಾಗಿ ಸೇರಿಸಿ ಉಪ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದು, ಬಿಜೆಪಿ ಅಭ್ಯರ್ಥಿ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರ: ವಾರ್ಡಿನಲ್ಲಿ ಈ ಹಿಂದೆ ಸ್ಪರ್ಧೆ ಮಾಡಿ ಗೆದ್ದಿದ್ದ ಕಾಂಗ್ರೆಸ್‌ನ ಸುಧಾ ನಿಧನರಾದರು. ಅವರ ಸಾವು ಅನಿರೀಕ್ಷಿತವಾಯಿತು. ತೆರವಾದ ಸ್ಥಾನಕ್ಕೆ ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಆಯೋಗದ ನೀತಿ, ನಿಯಮವನ್ನು ಸಂವಿಧಾನ ಚೌಕಟ್ಟಿನಲ್ಲಿ ಅನುಸರಿಸಿ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.
ಬಿಜೆಪಿಯಿಂದ ಮಾತ್ರ ವಾರ್ಡ್ ಅಭಿವೃದ್ಧಿ: ವಾರ್ಡ್‌ನ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯಿಂದ ಮಾತ್ರ ಸಾಧ್ಯವಾಗಿದ್ದು, ವಾರ್ಡಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು. ಪ್ರಧಾನಿ ನರೇಂದ್ರಮೋದಿ ಆಡಳಿತ ಮತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಆಡಳಿತವಿದ್ದು, ಮತದಾರರು ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ನೀಡುವ ವಿಶ್ವಾಸ ಇದೆ ಎಂದರು.
ಅಭ್ಯರ್ಥಿ ಪದ್ಮಾ ವೀರಣ್ಣ ಮಾತನಾಡಿ, ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ವಾರ್ಡಿನ ಎಲ್ಲಾ ಮತದಾರರು ಮನೆಗೂ ಮನೆಗೂ ತೆರಳಿ ಮತಯಾಚನೆ ಮಾಡುವುದಾಗಿ ಹೇಳಿದ ಅವರು, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ವಾರ್ಡಿನಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹಿಂದುಳಿದ ಮೋರ್ಚಾ ನಗರ ಮಂಡಲದ ಅಧ್ಯಕ್ಷ ಮಹದೇವಪ್ಪ, ಬಿಜೆಪಿ ಟೌನ್ ಅಧ್ಯಕ್ಷ ಲಕ್ಷ್ಮಿಪತಿ, ನಗರಸಭಾ ಸದಸ್ಯರಾದ ಜಿ.ಪಿ.ಶಿವಕುಮಾರ್, ಕವಿತಾ, ನಾಗಣ್ಣ, ಚಿಂತು ಪರಮೇಶ್, ಜಿಪಂ ಸದಸ್ಯ ನಾಗರಾಜು, ಮುಖಂಡರಾದ ಇನ್ಸಾರ್, ಶಿವಕುಮಾರ್, ಕಿನಕನಹಳ್ಳಿ ರಾಚಯ್ಯ, ಟಿವಿಎಸ್ ಪ್ರಭು, ವಿರೂಪಾಕ್ಷ, ಶಿವಮೂರ್ತಿ ಇತರರು ಇದ್ದರು.