Advertisement

ಉಪ ಚುನಾವಣೆ ಕಣ : ಕೈ, ಕಮಲಕ್ಕೆ ಅಗ್ನಿಪರೀಕ್ಷೆ, ತೆನೆಗೆ ಅಸ್ತಿತ್ವದ ಪ್ರಶ್ನೆ

11:54 PM Mar 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಣ ಸಜ್ಜಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇದು ಮತ್ತೂಂದು ಅಗ್ನಿಪರೀಕ್ಷೆಯಾದರೆ ಜೆಡಿಎಸ್‌ಗೆ ಅಸ್ತಿತ್ವ ಸಾಬೀತುಪಡಿಸುವ ಸವಾಲಿನ ಪ್ರಶ್ನೆಯಾಗಿದೆ.

Advertisement

ಉಪ ಚುನಾವಣೆ ಫ‌ಲಿತಾಂಶದಿಂದ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗದು. ಆದರೆ ಸಿ.ಡಿ. ಪ್ರಕರಣ ಎಬ್ಬಿಸಿರುವ ರಾಡಿಯ ಹಿನ್ನೆಲೆಯಲ್ಲಿ ಜನರ ನಾಡಿ ಮಿಡಿತ ತಿಳಿಯಲಿದೆ.

ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಉಪ ಚುನಾವಣೆ ಪ್ರತಿಷ್ಠೆ. ಬಸವಕಲ್ಯಾಣದಲ್ಲಿ ಕಣಕ್ಕಿಳಿದು ಉಳಿದೆರಡು ಕಡೆ ಸ್ಪರ್ಧಿಸದಿರುವ ಜೆಡಿಎಸ್‌ ತೀರ್ಮಾನವೂ ಕುತೂಹಲ ಮೂಡಿಸಿದೆ.

ಯಾರಿಗೆ ನಷ್ಟ?
ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಲ್ಪಸಂಖ್ಯಾಕ ಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿಸಿರುವುದರಿಂದ ಯಾರಿಗೆ ನಷ್ಟ ಎಂಬ ಚರ್ಚೆ ಆರಂಭವಾಗಿವೆ.

ಕಾಂಗ್ರೆಸ್‌ ಅನುಕಂಪದ ಅಲೆ ನಂಬಿ ನಾರಾಯಣ್‌ ರಾವ್‌ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಬಸವರಾಜ್‌ ಸಲಗರ ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ಜೆಡಿಎಸ್‌ ಸೈಯದ್‌ ಹೆಸ್ರಲ್‌ ಅಲಿ ಖಾದ್ರಿ ಅವರನ್ನು ಕಣಕ್ಕಿಳಿಸಿದೆ.

Advertisement

ಮೂರೂ ಕ್ಷೇತ್ರಗಳಲ್ಲಿ ಫ‌ಲಿತಾಂಶದ ಮೇಲೆ ಜಾತಿ ರಾಜಕಾರಣ, ಸಿ.ಡಿ. ಪ್ರಕರಣ ಪ್ರಭಾವ ಬೀರುವ ಸಾಧ್ಯತೆಗಳಿವೆ. ಜತೆಗೆ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸು ಪರಿಣಾಮ ಬೀರಲಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ದಂಡು ಮೂರೂ ಕ್ಷೇತ್ರಗಳಿಗೆ ಲಗ್ಗೆ ಇರಿಸಲಿದೆ.

ಹೈ ವೋಲ್ಟೇಜ್
ಬೆಳಗಾವಿ ಲೋಕಸಭೆ ಕ್ಷೇತ್ರ ಹೈ ವೋಲ್ಟೇಜ್‌ನದ್ದಾಗಿದೆ. ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಹೆಸರು ಘೋಷಣೆಯಾಗಿ ಚಿತ್ರಣವೇ ಬದಲಾಗಿದೆ. ಇದಕ್ಕೆ ಪ್ರತ್ಯಸ್ತ್ರವಾಗಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಅನುಕಂಪದ ಅಲೆಗೆ ಶರಣಾಗಿದೆ. ಇಲ್ಲಿ ಜಾರಕಿಹೊಳಿ ಕುಟುಂಬದ ಎಲ್ಲರೂ ಒಟ್ಟಾಗಿ ಸತೀಶ್‌ ಪರ ಅಖಾಡಕ್ಕಿಳಿಯುತ್ತಾರೆಯೇ ಇಲ್ಲವೇ ಎಂಬುದರ ಮೇಲೆ ಫ‌ಲಿತಾಂಶ ತೀರ್ಮಾನವಾಗಲಿದೆ. ಸತೀಶ್‌ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ಬೆಳಗಾವಿ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಬಾಲಚಂದ್ರ ಅವರ ಅರಭಾವಿ, ರಮೇಶ್‌ ಅವರ ಗೋಕಾಕ್‌ ಬರಲಿದೆ. ಹೀಗಾಗಿ ಸಹೋದರರ ತೀರ್ಮಾನ ಕುತೂಹಲ ಮೂಡಿಸಿದೆ.

ನೇರ ಪೈಪೋಟಿ
ಮಸ್ಕಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅದಲು ಬದಲಾಗಿದ್ದು, ಪಕ್ಷವೂ ಬದಲಾಗಿದೆ. ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪ ಗೌಡ ಪಾಟೀಲ್‌ ಬಿಜೆಪಿಯಿಂದ ಟಿಕೆಟ್‌ ಪಡೆದಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಸವನಗೌಡ ತುರವಿಹಾಳ್‌ ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದಾರೆ. ಈ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್‌, ಬಿಜೆಪಿಯಲ್ಲಿದ್ದ ತುರವಿಹಾಳ್‌ ಅವರನ್ನು ಕರೆತಂದಿದ್ದರೆ ಆಪರೇಷನ್‌ ಕಮಲ ಮೂಲಕ ಬಂದಿರುವ ಪ್ರತಾಪಗೌಡ ಪಾಟೀಲ್‌ ಅವರನ್ನು ಗೆಲ್ಲಿಸಲು ಬಿಜೆಪಿ ಪಣ ತೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next