Advertisement

ಶಿರಾದಲ್ಲಿ ಉಪಚುನಾವಣೆ: ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಂದ ಮತದಾನ, ಟೆಂಪಲ್ ರನ್

04:45 PM Nov 03, 2020 | keerthan |

ತುಮಕೂರು: ರಾಜ್ಯದ ಗಮನ ಸೆಳೆದಿರುವ ಶಿರಾ ಉಪಕದನ ಆರಂಭವಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆ 8 ಗಂಟೆಯಿಂದ ಮತ ಚಲಾಯಿಸಲು ಮತಕೇಂದ್ರಗಳತ್ತ ಬರುತ್ತಿದ್ದಾರೆ.

Advertisement

ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ 330 ಮತಗಟ್ಟೆಗಳಿದ್ದು, 1,10,265 ಪುರುಷ ಮತದಾರರು ಹಾಗೂ 1,05,419 ಮಹಿಳಾ ಮತದಾರರು ಸೇರಿ 2,15,494 ಮತದಾರರು ಮತ ಚಲಾಯಿಸಲಿದ್ದಾರೆ.

ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೋವಿಡ್ -19 ಮಾರ್ಗಸೂಚಿಯನ್ನು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಅನುಸರಿಸುತ್ತಿದೆ. ಮಾಸ್ಕ್, ಥರ್ಮಲ್ ಸ್ಕಾನಿಂಗ್, ಹ್ಯಾಂಡ್ ಗ್ಲೌಸ್ ವ್ಯವಸ್ಥೆ ಮಾಡಲಾಗಿತ್ತು.

ಶಾಂತಿಯುತವಾಗಿ ಮತದಾನ ಆರಂಭಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಡಾ. ಎಂ.ಆರ್ ರಾಜೇಶ್ ಗೌಡ ಚಿರತೆಹಳ್ಳಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ‌ ಜಯಚಂದ್ರ ಶಿರಾ ನಗರದ ಜ್ಯೋತಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಶಿರಾ ನಗರದ ರಂಗನಾಥ ಪದವಿ ಪೂರ್ವ ಕಾಲೇಜಿನ ಮತಗಟ್ಟೆಲ್ಲಿ ಮತ ಚಲಾಯಿಸಲಿದ್ದಾರೆ.

Advertisement

ಕ್ಷೇತ್ರದ ಎಲ್ಲಾಕಡೆ ಮತದಾನವನ್ನು ಶಾಂತಿಯುತವಾಗಿ ನಡೆಸಲು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ:ಇಂದು ಮತ ಸಮರ; ಶಿರಾ, ಆರ್‌.ಆರ್‌. ನಗರ ಕ್ಷೇತ್ರಕ್ಕೆ ಹಕ್ಕು ಚಲಾವಣೆ

ಮತಚಲಾಯಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ‌. ರಾಜೇಶ್ ಗೌಡ, ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮಾತನಾಡಿ, ನಾನು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಕೈಯಿಡಿಯಲಿವೆ. ಮತದಾರರು ನನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಟಿ ಬಿ ಜಯಚಂದ್ರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಕ್ಷೇತ್ರದ ಎಲ್ಲಾ ಕಡೆ ಮತಗಟ್ಟೆಗಳಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದರು. ಪ್ರಾರಂಭದಲ್ಲಿ ನೀರಸ ಮತದಾನವಾಗಿದ್ದು ಬೆಳಿಗ್ಗೆ 9 ಗಂಟೆ ವೇಳೆಗೆ ಕ್ಷೇತ್ರದಲ್ಲಿ 8.25 ರಷ್ಟು ಮತದಾನವಾಗಿತ್ತು.

ಮತದಾನ ಮಾಡಲು ರೆಡ್ ಕಾರ್ಪೆಟ್ ಸ್ವಾಗತ

ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮಾದರಿ ಮತಗಟ್ಟೆ ಕೇಂದ್ರದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ ಮಾಡಲಾಗಿದೆ.

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಮತದಾನ ಮಾಡುವ ಮೊದಲು ಪತಿ, ಮಾಜಿ ಸಚಿವ ದಿ.ಬಿ.ಸತ್ಯನಾರಾಯಣ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ

ಶಿರಾದ ಕಳ್ಳಂಬೆಳ್ಳ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಈ ಮತಗಟ್ಟೆಯಲ್ಲಿ ಒಟ್ಟು 584 ಮತದಾರರಿದ್ದು, 9 ಗಂಟೆಯ ಒಳಗಾಗಿ 67 ಪುರುಷ ಹಾಗೂ 68 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ‌‌.

95 ವರ್ಷದ ಕಂಪಣ್ಣ ವೀಲ್ ಚೇರ್ ನಲ್ಲಿ ಬಂದು ಬೆಳಗ್ಗೆಯೇ ಮತದಾನ ಮಾಡಿದ್ದ ದೃಶ್ಯ ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next