Advertisement

2022ರ ವೇಳೆಗೆ ಭಾರತ ವಿಶ್ವಗುರು

11:43 AM Sep 12, 2017 | Team Udayavani |

ಬೆಂಗಳೂರು: ಭಾರತವನ್ನು ಮಹಾಶಕ್ತಿಯುತ ರಾಷ್ಟ್ರವನ್ನಾಗಿಸಿ, 2022ರ ವೇಳೆಗೆ ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುನ್ನಡೆಯುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್‌ಕುಮಾರ್‌ ಹೇಳಿದರು. ವಿಜಯನಗರದಲ್ಲಿ ನವೀಕರಿಸಿದ ಸ್ವಾಮಿ ವಿವೇಕಾನಂದ ಉದ್ಯಾನವನ ಉದ್ಘಾಟಿಸಿ, ಯುವಚೇತನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

Advertisement

19ನೇ ಶತಮಾನ ಇಂಗ್ಲೆಂಡಿಗೆ ಸೇರಿತ್ತು, 20ನೇ ಶತಮಾನ ಅಮೆರಿಕಾದವರದ್ದಾಗಿತ್ತು. ಆದರೆ, 21ನೇ ಶತಮಾನ ಚೀನಾ ದೇಶದ್ದಲ್ಲ. ಇದು ಭಾರತದ ಶತಮಾನವಾಗಿದ್ದು, ದೇಶದ ಆರ್ಥಿಕತೆ ಸೇರಿದಂತೆ ಎಲ್ಲಾ ವಿಷಯದಲ್ಲೂ  ಸಾಧನೆ ಮಾಡುತ್ತಿದ್ದೇವೆ. ವಿವೇಕಾನಂದರ ಆಶಯವನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅದಕ್ಕೆ ಬೆಂಬಲ ನೀಡಬೇಕು ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ಧರ್ಮವೇ ಭಾರತದ ಮೂಲವಾಗಿದ್ದು, ಧರ್ಮವನ್ನು ಮರೆತರೆ ದೇಶ ಸರ್ವನಾಶವಾಗುತ್ತದೆ. ಧರ್ಮವನ್ನು ತಪ್ಪಾಗಿಸಿ ಅರ್ಥೈಸಿಕೊಂಡವರಿಂದ ಆಷಾಢಭೂತಿತನ, ಮತಾಂಧತೆಯ ಆಚರಣೆ ಹಾಗೂ ರಕ್ತಪಾತ ನಡೆಯುತ್ತಿದೆ. ಧರ್ಮಗಳೆಲ್ಲ ಸತ್ಯ. ಆದರೆ, ಎಲ್ಲ ಧರ್ಮಗಳು ಒಂದೇ ಅಲ್ಲ ಎಂದು ಸ್ಪಷ್ಟಪಡಿಸಿದರು.

ದೇವರಲ್ಲಿ ನಂಬಿಕೆ ಇಟ್ಟವರು ಆಸ್ತಿಕರು, ಇಲ್ಲದವರು ನಾಸ್ತಿಕರು ಎಂಬುದನ್ನು ವೇದಗಳು ಹೇಳಿವೆ. ದೇವರನ್ನು ನಂಬಿದ ವ್ಯಕ್ತಿ ತನ್ನನ್ನೇ ತಾನು ನಂಬುವುದಿಲ್ಲವಾದರೆ ಅವನು ಕೂಡ ನಾಸ್ತಿಕನಾಗುತ್ತಾನೆ. ದೇವರಿಗಿಂತ ಮೊದಲು ನಮ್ಮಲ್ಲಿನ ಆತ್ಮವಿಶ್ವಾಸವನ್ನು ನಂಬಬೇಕು ಮತ್ತು ಅದರಂತೆ ನಡೆಯಬೇಕು ಎಂದು ಹೇಳಿದರು. ವಿಜಯನಗರದ ಮಾರುತಿ ಮಂದಿರದಿಂದ ನಡೆದ ಭವ್ಯ ಮೆರವಣಿಗೆಯಲ್ಲಿ ವಿವೇಕಾನಂದರ ವೇಷಧಾರಿ ಮಕ್ಕಳು ಗಮನಸೆಳೆದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿದ್ದವು.

ವಿಧಾನ ಪರಿಷತ್‌ ಸದಸ್ಯ ವಿ. ಸೋಮಣ್ಣ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್‌, ವಿಜಯವಿವೇಕ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್‌. ಶಿವಶಂಕರ್‌ ರಾವ್‌, ಗೋವಿಂದರಾಜನಗರ ವಾರ್ಡ್‌ನ ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ, ಬಿಜೆಪಿ ಮುಖಂಡ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next