ಹೊಸದಿಲ್ಲಿ: ಕೆನಡಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಕ್ಟಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಜೇತ ಲಕ್ಷ್ಯ ಸೇನ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ 9ನೇ ಶ್ರೇಯಾಂಕಿತ ಆಟಗಾರ ಚೆನ್ ಶಿಯಾವು ಅವರನ್ನು 15-21, 21-17, 21-14 ಅಂತರದಿಂದ ಮಣಿಸಿದರು.
4ನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರಿನ್ನು ಮಲೇಶ್ಯದ ಐದಿಲ್ ಶೊಲೇಹ್ ಸಾದಿಕಿನ್ ಅವರನ್ನು ಎದುರಿಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಬೈ ಪಡೆದಿದ್ದ ಲಕ್ಷ್ಯ, ಬಳಿಕ ಮೆಕ್ಸಿಕೋದ ಅರ್ಮಾಂಡೊ ಗೈಟಾನ್, ಇಟೆಲಿಯ ಜಿಯೋವಾನ್ನಿ ಟೋಟಿ ಅವರನ್ನು ನೇರ ಗೇಮ್‌ಗಳಲ್ಲಿ ಕೆಡವಿದ್ದರು.
ಡಬಲ್ಸ್‌ನಲ್ಲೂ ಮುನ್ನಡೆ
ಪುರುಷರ ಡಬಲ್ಸ್‌ನಲ್ಲಿ ವಿಷ್ಣುವರ್ಧನ್-ಶ್ರೀಕಾಂತ್ ಸಾಯಿ ಕುಮಾರ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು 21-11, 21-17 ಅಂತರದಿಂದ ಇಂಡೋನೇಶ್ಯದ ದ್ವಿಕಿ ರಫಿಯಾನ್ ರೆಸ್ತು-ಬೆರ್ನಾಡಸ್ ಬಗಾಸ್ ಕುಸುಮವರ್ಧನ ಜೋಡಿಯನ್ನು ಪರಾಭವಗೊಳಿಸಿದರು.
ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಪ್ರಿಯಾಂಶು ರಾಜಾವತ್, ಅಲಾಪ್ ಮಿಶ್ರಾ, ಕಿರಣ್ ಜಾರ್ಜ್; ವನಿತಾ ಸಿಂಗಲ್ಸ್‌ನಲ್ಲಿ ಪೂರ್ವಾ ಬರ್ವೆ ಪರಾಭವಗೊಂಡಿದ್ದಾರೆ.ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಸಾಧಕಿಯೆಂದರೆ ಸೈನಾ ನೆಹ್ವಾಲ್. ಅವರು 2008ರ ಪುಣೆ ಪಂದ್ಯಾವಳಿಯಲ್ಲಿ ಸೈನಾ ಸ್ವರ್ಣ ಸಾಧನೆಗೈದಿದ್ದರು.