ಕೌಲಾಲಂಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ 2023ರ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ.
ಈ ವರ್ಷದ ಕೂಟವು ಡೆನ್ಮಾರ್ಕ್‌ನ ಕೊಪೆನ್‌ಹಾಗನ್‌ನಲ್ಲಿ ಆ. 21ರಿಂದ 27ರ ವರೆಗೆ ನಡೆಯಲಿದೆ. ಇದರ ಡ್ರಾ ಗುರುವಾರ ನಡೆದಿದ್ದು ಭಾರತದ ಪುರುಷರ ಸಿಂಗಲ್ಸ್‌ನ ಸವಾಲಿನ ನೇತೃತ್ವವನ್ನು ಎಚ್.ಎಸ್. ಪ್ರಣಯ್ ವಹಿಸಲಿದ್ದಾರೆ. ದ್ವಿತೀಯ ಶ್ರೇಯಾಂಕ ಪಡೆದಿರುವ ಅವರು ಮೊದಲ ಸುತ್ತಿನಲ್ಲಿ ಫಿನ್ಲಂಡಿನ ಕಾಲೆ ಕೊಲೊjನೆನ್ ಅವರನ್ನು ಎದುರಿಸಲಿದ್ದಾರೆ.
ಕಣದಲ್ಲಿರುವ ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಅನುಕ್ರಮವಾಗಿ ಮಾರಿಷಸ್‌ನ ಜಾರ್ಜಸ್ ಜೂಲಿಯನ್ ಪೌಲ್ ಮತ್ತು ಜಪಾನಿನ ಕೆಂಟ ನಿಶಿಮೊಟೊ ಅವರ ಸವಾಲಿಗೆ ಉತ್ತರಿಸಲಿದ್ದಾರೆ.
ಕಳೆದ 12 ತಿಂಗಳಲ್ಲಿ ಪ್ರಣಯ್ ಅತ್ಯಂತ ಸ್ಥಿರ ನಿರ್ವಹಣೆ ನೀಡುತ್ತಿರವ ಸಿಂಗಲ್ಸ್ ಆಟಗಾರರಾಗಿದ್ದಾರೆ. ಸದ್ಯ ವಿಶ್ವದ 9ನೇ ರ್‍ಯಾಂಕಿನ ಆಟಗಾರರಾಗಿರುವ ಅವರು ಮೇಯಲ್ಲಿ ನಡೆದ ಮಲೇಷ್ಯಾ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ್ದರಲ್ಲದೇ ಕಳೆದ ವಾರ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.
ವನಿತೆಯರ ಸಿಂಗಲ್ಸ್‌ನಲ್ಲಿ ಸಿಂಧು ಮಾತ್ರ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ವಿಶ್ವ ಪ್ರಶಸ್ತಿ ಗೆದ್ದಿರುವ ಸಿಂಧು ಅವರ ಹಾದಿ ಕಠಿನವಾಗಿದ್ದು ಥಾಯ್ಲೆಂಡಿನ ರಚನಾಕ್ ಇಂತನಾನ್ ಮತ್ತು ಅಗ್ರ ಶ್ರೇಯಾಂಕದ ಕೊರಿಯದ ಆ್ಯನ್ ಸೆ ಯಂಗ್ ಎದುರಾಗುವ ಸಾಧ್ಯತೆಯಿದೆ.