Advertisement

ಐತಿಹಾಸಿಕ ಚಿನ್ನದ ಮೇಲೆ ಸಿಂಧು ಕಣ್ಣು

06:00 AM Aug 05, 2018 | Team Udayavani |

ನಾಂಜಿಂಗ್‌ (ಚೀನ): ಭಾರತದ ಅಗ್ರ ಶ್ರೇಯಾಂಕಿತ ಶಟ್ಲರ್‌ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಿ ಹೊಸ ಇತಿಹಾಸದತ್ತ ಮುಖ ಮಾಡಿದ್ದಾರೆ. ಶನಿವಾರ ನಡೆದ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಜಪಾನಿನ ಅಕಾನೆ ಯಮಾಗುಚಿ ಅವರನ್ನು 21- 16, 24 -22 ಗೇಮ್‌ಗಳ ಅಂತರದಲ್ಲಿ ಮಣಿಸಿದರು.

Advertisement

ರವಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಿಂಧು ಸ್ಪೇನಿನ ಕ್ಯಾರೋಲಿನಾ ಮರಿನ್‌ ವಿರುದ್ಧ ಸೆಣಸಲಿದ್ದಾರೆ. ಗೆದ್ದರೆ ಮೊದಲ ಬಾರಿಗೆ ವಿಶ್ವ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸತತ 2ನೇ ಫೈನಲ್‌
ಇದು ಸಿಂಧು ಕಾಣುತ್ತಿರುವ ಸತತ 2ನೇ ವಿಶ್ವ ಬ್ಯಾಡ್ಮಿಂಟನ್‌ ಫೈನಲ್‌. ಕಳೆದ ವರ್ಷ ಗ್ಲಾಸೊYದಲ್ಲಿ ನಡೆದ ಕೂಟದಲ್ಲಿ ಅವರು ಜಪಾನಿನ ನಜೋಮಿ ಒಕುಹಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದರು. ಈ ಬಾರಿ ಇದು ಚಿನ್ನವಾಗಿ ಪರಿವರ್ತನೆಯಾಗಲಿ ಎಂಬುದು ಭಾರತೀಯ ಕ್ರೀಡಾ ಪ್ರೇಮಿಗಳ ಆಶಯ. ಇದಕ್ಕೂ ಮುನ್ನ ಸಿಂಧು 2013 ಹಾಗೂ 2014ರ ಕೂಟಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಈವರೆಗೆ ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತೀಯರ್ಯಾರೂ ಬಂಗಾರದ ಪದಕ ಗೆದ್ದಿಲ್ಲ. ಇದಕ್ಕೆ ಸಿಂಧು ಮುನ್ನುಡಿ ಬರೆಯುವರೇ ಎಂಬುದೊಂದು ಕಾತರ.

ರೋಚಕ ಸೆಮಿ ಹೋರಾಟ
ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದ ಆರಂಭದಿಂದಲೂ ವೀರೋಚಿತ ಹೋರಾಟ ತೋರಿದ ಸಿಂಧು, ಮೊದಲ ಗೇಮ್‌ನಲ್ಲೇ ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಗೇಮ್‌ನಲ್ಲಿ ಅಮೋಘ ಆಟವಾಡಿದ ಯಮಾಗುಚಿ ತಿರುಗಿ ಬೀಳುವ ಸೂಚನೆ ನೀಡಿದರು. ಆದರೆ ಸಿಂಧು ಕೂಡ ತೀವ್ರ ಪ್ರತಿರೋಧ ತೋರಿದರು. ಇದರ ಪರಿಣಾಮ, ಇಬ್ಬರ ನಡುವೆ ಅಂಕ ಗಳಿಕೆಯಲ್ಲಿ ಭಾರೀ ಪೈಪೋಟಿಯೇ ಏರ್ಪಟ್ಟಿತು. ಹೀಗಾಗಿ 2ನೇ ಗೇಮ್‌, ಗೆಲುವಿಗೆ ಬೇಕಾದ 21 ಅಂಕಗಳ ಗಡಿಯನ್ನೂ ದಾಟಿ ಮುಂದುವರಿಯಿತು. ಅಂತಿಮವಾಗಿ, ಸಿಂಧು ಅವರು 24-22 ಅಂತರದಲ್ಲಿ ಗೆಲುವು ಪಡೆದರು.

ಸಿಂಧು-ಮರಿನ್‌ ಮುಖಾಮುಖೀ
ಫೈನಲ್‌ ಎದುರಾಳಿ ಕ್ಯಾರೊಲಿನಾ ಮರಿನ್‌ ಅವರೊಂದಿಗೆ ಸಿಂಧು ಈವರೆಗೆ 11 ಬಾರಿ ಮುಖಾಮುಖೀಯಾಗಿದ್ದಾರೆ. ಇದರಲ್ಲಿ 6 ಬಾರಿ ಮರಿನ್‌ ಗೆಲುವು ಸಾಧಿಸಿದ್ದರೆ, ಸಿಂಧು 5 ಬಾರಿ ಜಯ ಕಂಡಿದ್ದಾರೆ. ಮರಿನ್‌ ವಿರುದ್ಧ ಸೋತ ಪ್ರಮುಖ ಪಂದ್ಯಗಳಲ್ಲಿ 2016ರ ಒಲಿಂಪಿಕ್ಸ್‌ ಫೈನಲ್‌ ಕೂಡ ಒಂದು.

Advertisement

ಒಲಿಂಪಿಕ್ಸ್‌ ಅನಂತರ ನಡೆದಿದ್ದ ದುಬಾೖ ವಿಶ್ವ ಸೂಪರ್‌ ಸೀರಿಸ್‌ ಫೈನಲ್ಸ್‌ನ ಬಿ ಗುಂಪಿನ ಪಂದ್ಯದಲ್ಲಿ ಮರಿನ್‌ ಅವರನ್ನು ಮಣಿಸಿದ್ದ ಸಿಂಧು, 2017ರ ಯೂನೆಕ್ಸ್‌ ಸನ್‌ರೈಸ್‌ ಇಂಡಿಯಾ ಓಪನ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಪುನಃ ಮರಿನ್‌ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. ಆದರೆ, ಕಳೆದ ವರ್ಷದ ಸಿಂಗಾಪುರ್‌ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮರಿನ್‌ ವಿರುದ್ಧ ಸೋಲು ಕಂಡಿದ್ದರು. ಈ ವರ್ಷ ನಡೆದ ಮಲೇಶ್ಯ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮರಿನ್‌ ಅವರನ್ನು ಕಟ್ಟಿಹಾಕಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಸಾಧನೆ
ವರ್ಷ    ಸ್ಥಳ    ಪದಕ
2013    ಗುವಾಂಗ್‌ಜೌ    ಕಂಚು
2014    ಕೋಪನ್‌ಹೇಗನ್‌    ಕಂಚು
2017    ಗ್ಲಾಸೊY    ಬೆಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next