Advertisement

ಬಿವಿಕೆ ಅಯ್ಯಂಗಾರ್‌ ರಸ್ತೆ ಅವ್ಯವಸ್ಥೆಗಳ ಆಗರ

06:23 AM Feb 22, 2019 | |

ಬೆಂಗಳೂರು: ಬೆಳಗ್ಗೆಯಿಂದ ರಾತ್ರಿವರೆಗೆ ಸಂಚಾರ ದಟ್ಟಣೆಯ ಕಿರಿಕಿರಿ, ಅಡ್ಡ ರಸ್ತೆಗಳಿಂದ ಒಮ್ಮೆಲೆ ಮೈಮೇಲೆ ಬರುವ ವಾಹನಗಳು, ಜನರಿಗೆ ಬಳಕೆಯಾಗದೆ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಿರುವ ಪಾದಚಾರಿ ಮಾರ್ಗಗಳು, ರಸ್ತೆಯ ಬಹುತೇಕ ಭಾಗ ಅಕ್ರಮಿಸಿಕೊಂಡಿರುವ ವಾಹನಗಳು, ರಸ್ತೆ ಬದಿ ಕಂಡುಬರುವ ತ್ಯಾಜ್ಯ ರಾಶಿ…

Advertisement

ಶುಭ ಸಮಾರಂಭಗಳಿಗೆ ಬಟ್ಟೆ ಖರೀದಿಸುವ ವಿಚಾರದ ಬಂದಾಗ ಮೊದಲು ನೆನಪಾಗುವಂತಹ ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ನಿತ್ಯ ಕಂಡುಬರುವ ಸಾಮಾನ್ಯ ದೃಶ್ಯಗಳಿವು. ರಸ್ತೆಯಲ್ಲಿ ಭಾರಿ ಸಂಖ್ಯೆಯ ಜವಳಿ ಮಳಿಗೆಗಳಿರುವುದರಿಂದ ನಗರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಜನರು ಬಟ್ಟೆ ಖರೀದಿಗಾಗಿ ಇಲ್ಲಿಗೆ ಬರುತ್ತಾರೆ.

ಇದರೊಂದಿಗೆ ನಮ್ಮ ಮೆಟ್ರೋ ನಿಲ್ದಾಣವೂ ಸಹ ನಿರ್ಮಾಣವಾಗಿದೆ. ಅದರಂತೆ ನಿಲ್ದಾಣವಿರುವ ಒಂದು ಭಾಗ ವೇಗವಾಗಿ ಬೆಳೆಯುತ್ತಿದ್ದರೆ, ಮತ್ತೂಂದು ಕಡೆ ಅದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಕೆ.ಜಿ.ರಸ್ತೆಯ ತುದಿಯಿಂದ ಆರಂಭವಾಗುವ ಬಿವಿಕೆ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ವಾಣಿಜ್ಯ ಮಳಿಗೆಗಳಿದ್ದು, ದೇವಾಲಯ, ಮಸೀದಿ ಹಾಗೂ ಚಿತ್ರಮಂದಿರ ಇರುವುದರಿಂದ ನಿತ್ಯ ಹತ್ತಾರು ಸಾವಿರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದರಿಂದಾಗಿ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದರೂ, ಸ್ಥಳೀಯ ಸಂಸ್ಥೆಗಳು ಮಾತ್ರ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಈ ರಸ್ತೆಯಲ್ಲಿ ಸಾರ್ವಜನಿಕರು, ವಾಹನ ಸವಾರರು ಒಂದು ರೀತಿಯ ಸಮಸ್ಯೆಗಳನ್ನು ಅನುಭವಿಸಿದರೆ, ವ್ಯಾಪಾರಿಗಳು ಮತ್ತೂಂದು ರೀತಿಯ ಸಮಸ್ಯೆಗಳನು ಅನುಭವಿಸುತ್ತಿದ್ದಾರೆ. 

ತಲೆ ಹಾಕದ ಸಂಚಾರ ಪೊಲೀಸರು: ರಸ್ತೆಯ ಎರಡೂ ಬದಿ ಕಾರು, ಟೆಂಪೋ, ಆಟೋಗಳು ಹಾಗೂ ಪಾದಚಾರಿ ಮಾರ್ಗವನ್ನು ದ್ವಿಚಕ್ರ ವಾಹನಗಳು ಅಕ್ರಮಿಸಿಕೊಂಡ ಪರಿಣಾಮ ಜನರಿಗೆ ತೊಂದರೆಯಾಗುತ್ತಿದೆ. ಜತೆಗೆ ಸಾವಿರಾರು ಜನರು ಭೇಟಿ ನೀಡುವುದರಿಂದ ಬೆಳಗ್ಗೆಯಿಂದ ರಾತ್ರಿವರೆಗೆ ದಟ್ಟಣೆ ಸಮಸ್ಯೆಯಿದ್ದರೂ, ಸಂಚಾರ ಪೊಲೀಸರು ಮಾತ್ರ ದಟ್ಟಣೆ ನಿವಾರಿಸಲು ಹಾಗೂ ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಮುಂದಾಗುವುದಿಲ್ಲ ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಾದಚಾರಿ ಮಾರ್ಗವೇ ಕಾಣೆ!: ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಪಾದಚಾರಿಗಳು ಅಪಾಯದ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಕೇವಲ ಒಂದೆರೆಡು ಅಡಿಗಳಿಗೆ ಸೀಮಿತವಾಗಿರುವ ಪಾದಚಾರಿ ಮಾರ್ಗಗಳನ್ನೂ ಬಹುತೇಕ ವಾಣಿಜ್ಯ ಮಳಿಗೆಗಳು ಸಂಪೂರ್ಣವಾಗಿ ಅಕ್ರಮಿಸಿಕೊಂಡಿದ್ದು, ಜನರು ವಿಧಿಯಿಲ್ಲದೆ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಪಾದಚಾರಿ ಮಾರ್ಗದಲ್ಲಿಯೇ ಮಳಿಗೆಯ ಜಾಹೀರಾತು ಫ‌ಲಕಗಳು, ಸಗಟು ಉತ್ಪನ್ನಗಳ ಬಾಕ್ಸ್‌ಗಳು, ವ್ಯಾಪಾರ ಉತ್ಪನ್ನಗಳನ್ನು ಇರಿಸಿಕೊಂಡಿದ್ದರೂ ಪಾಲಿಕೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ. 

ಅರ್ಧ ರಸ್ತೆ ವಾಹನಗಳಿಗೆ ಮೀಸಲು: ಈ ರಸ್ತೆಯಲ್ಲಿ ಅತಿ ಹೆಚ್ಚಿನ ವಾಣಿಜ್ಯ ಉದ್ದಿಮೆಗಳಿದ್ದು, ಸರಕು-ಸಾಗಾಟ ಪ್ರಕ್ರಿಯೆ ಹೆಚ್ಚಾಗಿರುತ್ತದೆ. ಆ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಆಟೋಗಳು, ಟೆಂಪೋಗಳು ಹಾಗೂ ಮಾನವ ತಳ್ಳುಗಾಡಿಗಳು ಸಾಲುಗಟ್ಟಿ ನಿಂತಿರುತ್ತವೆ. ಈಗಾಗಲೇ ಕಿರಿದಾಗಿರುವ ರಸ್ತೆಯ ಅರ್ಧ ಭಾಗವನ್ನು ಈ ವಾಹನಗಳೇ ಕಬಳಿಸಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. 

ರಸ್ತೆಯಲ್ಲೇ ಚರಂಡಿ ನೀರು: ಜಲಮಂಡಳಿಯಿಂದ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮ್ಯಾನ್‌ಹೋಲ್‌ಗ‌ಳಿಂದ ಎರಡು ದಿನಗಳಿಗೊಮ್ಮೆ ಉಕ್ಕಿ ಹರಿದು ರಸ್ತೆಯಲ್ಲಿ ದುರ್ವಾಸನೆ ಹರಡುತ್ತದೆ. ಇನ್ನು ವಾಹನಗಳು ವೇಗವಾಗಿ ಸಂಚರಿಸಿದರೆ, ಕೊಳಚೆ ನೀರು ರಸ್ತೆಯಲ್ಲಿ ಓಡಾಡುವವರ ಮೈಮೇಲೆ ಬಿದ್ದ ಉದಾಹರಣೆಗಳೂ ಇವೆ. ಅವುಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಾಯೋಜನವಾಗಿಲ್ಲ ಎಂಬುದು ಇಲ್ಲಿನ ವ್ಯಾಪಾರಿಗಳ ಬೇಸರ.

ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಸಂಚಾರ ದಟ್ಟಣೆಯಿರುತ್ತದೆ. ಹತ್ತಾರು ವರ್ಷಗಳಿಂದ ಇದೇ ಸಮಸ್ಯೆಯಿದ್ದರೂ ಸಂಚಾರ ಪೊಲೀಸರು ಮಾತ್ರ ಶಾಶ್ವತ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ರಸ್ತೆ ಪಕ್ಕದಲ್ಲಿಯೇ ಗ್ರಾಹಕರು ವಾಹನಗಳನ್ನು ನಿಲುಗಡೆ ಮಾಡುವುದರಿಂದ ಮತ್ತಷ್ಟು ಸಮಸ್ಯೆಯಾಗುತ್ತಿದ್ದು, ಸಂಚಾರ ಪೊಲೀಸರು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು.
-ಅನುರಾಗ್‌, ಬೈಕ್‌ ಸವಾರ

ಸಮೀಪದ ಮಹಾರಾಜ ಕಾಂಪ್ಲೆಕ್ಸ್‌ನಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆಯಿದೆ. ಆದರೆ, ಗ್ರಾಹಕರು ಹಣ ಪಾವತಿಸಬೇಕೆಂಬ ಉದ್ದೇಶದಿಂದ ಮಳಿಗೆಗಳ ಮುಂದೆ ಅಥವಾ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಾರೆ. ಇನ್ನು ಪಾದಚಾರಿ ಮಾರ್ಗಗಳನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದು, ಪಾಲಿಕೆಯ ಅಧಿಕಾರಿಗಳು ಅವರನ್ನು ತೆರವುಗೊಳಿಸಲು ಕ್ರಮಕೈಗೊಳ್ಳುತ್ತಿಲ್ಲ.
-ರಮಣ್‌ ಸಿಂಗ್‌, ಜವಳಿ ವ್ಯಾಪಾರಿ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next