ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ನಂತರ ಇದೀಗ ಇನ್ನೂ 114 ಯುದ್ಧ ವಿಮಾನಗಳನ್ನು ಖರೀದಿಸಲು ವಾಯುಪಡೆ ಪ್ರಯತ್ನ ಆರಂಭಿಸಿದ್ದು, ಈ ಪ್ರಕ್ರಿಯೆ ರಫೇಲ್ ಯುದ್ಧ ವಿಮಾನ ಖರೀದಿಗಿಂತ ತ್ವರಿತವಾಗಿ ನಡೆಯ ಲಿದೆ. ರಫೇಲ್ ಖರೀದಿ ಪ್ರಕ್ರಿಯೆ ಸುಮಾರು 10 ವರ್ಷಗಳನ್ನು ತೆಗೆದುಕೊಂಡಿತ್ತು. ಆರಂಭ ದಲ್ಲಿ ಯುಪಿಎ ಸರಕಾರ 126 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಮುಂದಾಗಿತ್ತಾದರೂ, ನಂತರ ಬಂದ ಎನ್‌ಡಿಎ ಸರಕಾರ ಕೇವಲ 36 ವಿಮಾನಗಳಿಗಷ್ಟೇ ಒಪ್ಪಂದ ಮಾಡಿಕೊಂಡಿತ್ತು.
ಇನ್ನೂ 36 ರಫೇಲ್ ಜೆಟ್‌ಗಳ ಖರೀದಿಯ ಬಗ್ಗೆಯೂ ಫ್ರಾನ್ಸ್ ಜೊತೆಗೆ ಭಾರತ ಸರಕಾರ ಮಾತುಕತೆ ನಡೆಸುತ್ತಿದೆ. ಈ ಮಧ್ಯೆಯೇ, ಈಗ 114 ಜೆಟ್‌ಗಳ ಖರೀದಿಗೆ ವಿಶ್ವದ ಪ್ರಸಿದ್ಧ ಕಂಪೆನಿಗಳನ್ನು ವಾಯುಪಡೆ ಸಂಪರ್ಕಿಸುತ್ತಿದೆ. ಈಗಾಗಲೇ ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಯುರೋಫೈಟರ್, ರಷ್ಯನ್ ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೊರೇಶನ್, ಎಸ್‌ಎಎಬಿ ಸೇರಿದಂತೆ ಹಲವು ಕಂಪೆನಿಗಳು 1 ಲಕ್ಷ ಕೋಟಿ ರೂ. ಒಪ್ಪಂದದಲ್ಲಿ ಆಸಕ್ತಿ ವಹಿಸಿವೆ. ಈ ಎಲ್ಲ ಕಂಪೆನಿಗಳೂ ಈ ಹಿಂದೆ ಯುಪಿಎ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದವು ಎಂಬುದು ಗಮನಾರ್ಹ.
ಹಲವು ಕಂಪೆನಿಗಳು ವಿವಿಧ ರೀತಿಯ ಕೊಡುಗೆಗಳನ್ನೂ ನೀಡಲು ಮುಂದೆ ಬಂದಿದ್ದು, ಅಮೆರಿಕದ ಯುದ್ಧ ವಿಮಾನ ಕಂಪೆನಿಯು ಎಫ್16 ಜೆಟ್‌ಗಳ ತಯಾರಿಕೆ ಫ್ಯಾಕ್ಟರಿಯನ್ನು ಭಾರತದಲ್ಲೇ ಸ್ಥಾಪಿಸುವ ಬಯಕೆ ವ್ಯಕ್ತಪಡಿಸಿದೆ. ಹಳೆಯ ಯುದ್ಧ ವಿಮಾನಗಳು ಸೇವೆಯಿಂದ ತ್ವರಿತವಾಗಿ ನಿವೃತ್ತವಾಗುತ್ತಿವೆ. ಹೀಗಾಗಿ ಹೊಸ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ತ್ವರಿತ ಗೊಳಿಸುವ ಅನಿವಾರ್ಯ ವಾಯುಪಡೆ ಹಾಗೂ ಭಾರತ ಸರಕಾರಕ್ಕೆ ಇದೆ.