ಕೊಪ್ಪಳ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 4620 ರೂ. ದರ ನಿಗಪಡಿಸಿ ಖರೀದಿಗೆ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಾಲ್ನಂತೆ ಗರಿಷ್ಠ 10 ಕ್ವಿಂಟಲ್ನಷ್ಟು ಗುಣಮಟ್ಟದ ಕಡಲೆಕಾಳು ಖರೀದಿಸಲಾಗುವುದು. ಜೂ. 7ರೊಳಗೆ ಖರೀದಿಸಲಾಗುವುದು. ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣ. ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ. ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣ ಹಾಗೂ ಪಿಎಸಿಎಸ್, ಹಿರೇಸಿಂಧೋಗಿಯಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ ರೈತರು ಇದರ ಸದ್ಬಳಕೆ ಪಡೆದುಕೊಳ್ಳಬೇಕು ಎಂದರು.
ಖರೀದಿಗೆ ಅಗತ್ಯ ದಾಖಲೆಗಳು: ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ. 2018-19ನೇ ಸಾಲಿನ ಪಹಣಿ ಪತ್ರ ಮತ್ತು ಈ ಪಹಣಿ ಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಿಂದ ಕಡಲೆಕಾಳು ಬೆಳೆದ ಬಗ್ಗೆ ದೃಢೀಕರಣ ಪತ್ರ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್‌ಬುಕ್ ನಕಲು ಪ್ರತಿ. ರೈತರ ನೋಂದಣಿ ಖರೀದಿ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಮೇ 28ರೊಳಗಾಗಿ ಮಾಡಿಕೊಳ್ಳಬೇಕು. ಜಿಲ್ಲೆಯ ರೈತರು ಇದರ ಸದ್ಬಳಕೆ ಮಾಡಿಕೊಂಡು ಯೋಜನೆಯ ಯಶಸ್ಸಿಗೆ ಸಹಕರಿಸಬೇಕು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಯಾವುದೇ ಸಮಸ್ಯೆಗಳಿದ್ದಲ್ಲಿ ಕೊಪ್ಪಳ, ಕುಷ್ಟಗಿ, ಕುಕನೂರು ಹಾಗೂ ಗಂಗಾವತಿ ಎಪಿಎಂಸಿ ಕಾರ್ಯದರ್ಶಿ, ಶಾಖಾ ವ್ಯವಸ್ಥಾಪಕರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಶಾಖೆ ಕೊಪ್ಪಳ ದೂ.ಸಂ 08539-230010 ಅವರನ್ನು ಸಂಪರ್ಕಿಸಬೇಕು ಎಂದು ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಂಟಿ ಕೃಷಿ ನಿರ್ದೇಶಕಿ ಶಬಾನಾ ಶೇಖ್, ತೋಟಗಾರಿಕೆ ಇಲಾಖೆಯ ಮಂಜುನಾಥ ಇತರರಿದ್ದರು.
Advertisement
ನಗರದ ಕಚೇರಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಹಿಂಗಾರು ಹಂಗಾಮಿನ ಕಡಲೆಕಾಳು ಖರೀದಿಸುವ ಸಂಬಂಧ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. 2018-19ನೇ ಸಾಲಿನ ಹಿಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 4620 ರೂ. ರಂತೆ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಬೆಲೆ ನಿಗದಿಪಡಿಸಿದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಖರೀದಿಸಲು ಕಡಲೆಕಾಳು ಉತ್ಪನ್ನದ ಎಫ್‌ಎಕ್ಯೂ ಗುಣಮಟ್ಟ ಚೆನ್ನಾಗಿ ಒಣಗಿರಬೇಕು. ತೇವಾಂಶವು ಶೇ. 12ಕ್ಕಿಂತ ಕಡಿಮೆ ಇರಬೇಕು. ಕಡಲೆಕಾಳು ಉತ್ಪನ್ನ ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು. ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ಕಡಲೆ ಖರೀದಿಗೂ ಮುನ್ನ ಅಧಿಕಾರಿಗಳು ಈ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು ಎಂದರು.